ಕರ್ನಾಟಕ

ತೀರ್ಥಹಳ್ಳಿಯ ಯುವಕನಿಂದ ಅಡಿಕೆಯಿಂದ ಸ್ಯಾನಿಟೈಸರ್

Pinterest LinkedIn Tumblr


ಶಿವಮೊಗ್ಗ(ಜೂ.28): ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ. ಒಂದು ಕಡೆ ಬೆಲೆ ಕುಸಿತ, ಮತ್ತೊಂದು ಕಡೆ ಅಡಿಕೆಗೆ ಬಾಧಿಸುತ್ತಿರುವ ರೋಗಗಳಿಂದ ಸಂಕಷ್ಟಕ್ಕೆ ಪರಿಹಾರ ಇಲ್ಲದ ರೀತಿ ಆಗಿದೆ. ಗುಟ್ಕಾ ನಿಷೇಧವಾದರೆ ಅಡಿಕೆ ಬೆಳೆಗಾರರಿಗೆ ಬಹಳ ದೊಡ್ಡ ಪೆಟ್ಟು ಬೀಳಲಿದೆ. ಇದು ಸಹಜವಾಗಿ ರೈತರ ಆತಂಕಕ್ಕೆ ಕಾರಣವಾಗಿದೆ. ಮಲೆನಾಡಿನ ಯುವಕ ಅಡಿಕೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಅಡಿಕೆ ಟೀ ಸಂಶೋಧನೆ ಮಾಡಿದ್ದ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಡಿಕೆಯಿಂದ ಸ್ಯಾನಿಟೈಸರ್ ಸಂಶೋಧನೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯುವಕ ನಿವೇದನ್ ನೆಂಪೆ ಅಡಿಕೆಯಿಂದ ಟೀ ಸಂಶೋಧನೆ ಮಾಡಿದ್ದರು. ಅಡಿಕೆಗೆ ಗುಟ್ಕಾ ಬಿಟ್ಟು, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಅರೆಕಾ ಟೀ ಕಂಡು ಹಿಡಿದಿದ್ದರು. ಇದರಿಂದ ಅಡಿಕೆ ಬೆಳೆಗಾರರಿಗೆ ಅಡಿಕೆ ಮಾರಾಟ ಮಾಡಲು ಒಂದು ಹೊಸ ಪರ್ಯಾಯ ಮಾರ್ಗ ಸಿಕ್ಕಿತ್ತು. ಅದೇ ನಿವೇದನ್ ನೆಂಪೆ ಈಗ ಅಡಿಕೆಯಿಂದ ಮತ್ತೊಂದು ಹೊಸ ಸಂಶೋಧನೆ ಮಾಡಿದ್ದಾರೆ. ಅರೆಕಾ ಟೀ, ಅರೆಕಾ ಜ್ಯೂಸ್, ಕಾರಿನಲ್ಲಿ ಉಪಯೋಗಿಸುವ ಅರೆಕಾ ಫರ್ಮ್ಯೂಂ ಸಂಶೋಧಿಸಿದ್ದ ನಿವೇದನ್ ಇದೀಗ ಕೋವಿಡ್ -19 ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಅರೆಕಾ ಸ್ಯಾನಿಟೈಸರ್ ಸಂಶೋಧನೆ ಮಾಡಿದ್ದಾರೆ.

ಈ ಸ್ಯಾನಿಟೈಸರ್ ಉತ್ಪಾದನೆ ಆರಂಭಿಸಲು ಯಾರಾದರೂ ಯುವಕರು ಮುಂದೆ ಬರಬಹುದು ಎಂದು ಆಹ್ವಾನ ಕೂಡ ನೀಡಿದ್ದಾರೆ. ತಾವು ಇದರ ಬಗ್ಗೆ ಸಂಶೋಧನೆ ಮಾತ್ರ ನಡೆಸಿದ್ದು, ಇದನ್ನು ಉತ್ಪಾದಿಸಲು, ಆಸಕ್ತ ಯುವಕರಿಗೆ ಕರೆ ನೀಡಿದ್ದಾರೆ. ಯಾರೇ ಉತ್ಪಾದನೆ ಮುಂದೆ ಬಂದರೆ ಅವರಿಗೆ ಫಾರ್ಮುಲಾ ನೀಡುವುದಾಗಿ ಮಾಹಿತಿ ನೀಡಿದ್ದಾರೆ. ಅಡಿಕೆಯಿಂದ ಇದನ್ನು ಉತ್ಪಾದನೆ ಮಾಡುವುದರಿಂದ ಇತರೆ ಯಾವುದೇ ರೀತಿಯ ಹಾನಿಗಳು ಮನುಷ್ಯರಿಗೆ ಆಗುವುದಿಲ್ಲ ಎನ್ನುತ್ತಾರೆ.

ಅಡಿಕೆಯಲ್ಲಿ ಗ್ಯಾಲಿಕ್ಯಾಸಿಡ್ ಇದ್ದು, ವೈರಸ್ ಅಥವಾ ಬ್ಯಾಕ್ಟಿರಿಯಾ ಕೊಲ್ಲುವ ಶಕ್ತಿ ಇದೆ. ಜೊತೆಗೆ ಸ್ಯಾನಿಟೈಸರ್ ಗೆ ಉಪಯೋಗಿಸುವ ಆಲ್ಕೋ ಹಾಲ್ ಬಳಕೆ ಮಾಡಲಾಗಿದೆ. ಯಾವುದೇ ರಾಸಾಯನಿಕ ಬಳಸದೇ, ಈ ಸ್ಯಾನಿಟೈಸರ್ ಸಂಶೋಧಿಸಿದ್ದಾರೆ.
ಈ ಉತ್ಪನ್ನಕ್ಕೆ ಪರವಾನಿಗೆ ಪಡೆಯಲು, ಪರೀಕ್ಷೆಗೆ ಒಳಪಡಿಸಲು ಆಯುಷ್ ಇಲಾಖೆಗೆ ಅರ್ಜಿಯನ್ನು ನಿವೇದನ್ ನೆಂಪೆ ಸಲ್ಲಿಸಿಲ್ಲ. ಯಾರಾದರೂ ಆಸಕ್ತರು ಈ ಉತ್ಪನ್ನ ಉತ್ಪಾದನೆ(ತಯಾರಿಸಲು)ಗೆ ಮುಂದೆ ಬಂದರೆ, ಅವರಿಗೆ ಫಾರ್ಮಲಾ ನೀಡಿ, ಅವರಿಂದಲೇ ಅರ್ಜಿ ಸಲ್ಲಿಸುತ್ತೇವೆ ಎಂದು ನಿವೇದನ್ ನೆಂಪೆ ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅಡಿಕೆ ನಿಷೇಧದ ಗುಮ್ಮ ಬೆಳೆಗಾರರಿಗೆ ಕಾಡುತ್ತಿದೆ, ಇಂತಹ ಕ್ಲಿಷ್ಟ ಸಂದರ್ಭದಲ್ಲಿ, ಅಡಿಕೆ ಮೇಲೆ ಸಂಶೋಧನೆ ನಡೆಸುತ್ತಿರುವ ನಿವೇದನ್ ನೆಂಪೆಯವರು, ಅಡಿಕೆಯ ಪರ್ಯಾಯ ವಿವಿಧ ಉತ್ಪನ್ನಗಳನ್ನು ಸಂಶೋಧಿಸುವ ಮೂಲಕ ಅಡಿಕೆ ಬೆಳೆಗಾರರ ನೆರವಿಗೆ ನಿಂತಿದ್ದಾರೆ.

ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು, ಪ್ರತಿಯೊಬ್ಬರು ಸ್ಯಾನಿಟೈಸರ್ ಮೊರೆ ಹೋಗಿದ್ದು, ಇದನ್ನೇ ಅವಕಾಶ ಮಾಡಿಕೊಂಡಿರುವ ನಿವೇದನ್, ಅಡಿಕೆಯನ್ನು ಇತರೆ ಬಳಕೆಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಉತ್ಪನ್ನ ಎಲ್ಲ ರೀತಿಯ ಪರವಾನಿಗೆ, ಆಯುಷ್ ಇಲಾಖೆ ಅನುಮತಿ ಪಡೆದು ಮಾರುಕಟ್ಟೆಗೆ ಬಂದರೆ, ಅಡಿಕೆ ಬೆಳೆಗಾರರಿಗೆ ಸ್ವಲ್ಪ ಸಹಾಯವಾಗುತ್ತೇ ಎನ್ನುವುದರಲ್ಲಿ ಎರಡು ಮಾತಿಲ್ಲ.

Comments are closed.