ಮಂಗಳೂರು : ಪ್ರಾಪರ್ಟಿ ಕಾರ್ಡ್, ಇ-ಖಾತಾ ಮತ್ತು ಆರ್.ಟಿ.ಸಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಶಾಸಕ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಇ-ಖಾತಾ ನೀಡಲು ಇರುವ ಸಮಸ್ಯೆಯ ಬಗ್ಗೆ ಸಮಗ್ರ ಚರ್ಚೆಗಳಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ 20 ದಿನಗಳೊಳಗಾಗಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಾಪರ್ಟಿ ಕಾರ್ಡ್, ಇ-ಖಾತಾ ಮತ್ತು ಆರ್.ಟಿ.ಸಿಯಲ್ಲಿರುವ ನ್ಯೂನತೆಗಳನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ, ಎ.ಡಿ.ಎಲ್.ಆರ್ (ನಗರ ಭೂ ದಾಖಲೆ) ಇಲಾಖೆಯ ಅಧಿಕಾರಿಗಳೊಂದಿಗೆ ವಿಸ್ತ್ರತವಾಗಿ ಚರ್ಚಿಸಲಾಗಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನ ಸಾಮಾನ್ಯರನ್ನು ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ. ಸಾರ್ವಜನಿಕರು ಅಧಿಕಾರಿಗಳ ಬಳಿ ಬಂದಾಗ ಅತ್ಯಂತ ಸುಲಭ ವಿಧಾನಗಳಲ್ಲೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ ದಾಖಲೆ ನೀಡಬೇಕು. ಅದಕ್ಕಿರುವ ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ್, ಪಾಲಿಕೆ ಸ್ಥಾಯಿ ಸಮಿತಿ ಅದ್ಯಕ್ಷ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅದ್ಯಕ್ಷೆ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು,ಶಕಿಲಾ ಕಾವಾ, ತಹಶಿಲ್ದಾರ್ ಗುರು ಪ್ರಸಾದ್,ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೆ ವಿಭಾಗ ಅಧಿಕಾರಿಗಳು, ಸಬ್ ರಿಜಿಸ್ಟರ್ ಅಧಿಕಾರಿಗಳು, ಗ್ರಾಮ ಕರಣಿಕ ಅಧಿಕಾರಿ, ಕ್ರೆಡಾಯ್ ಅಸೋಸಿಯೇಶನ್ ಪದಾಧಿಕಾರಿಗಳು, ಎಂಜಿನಿಯರ್ಸ್ ಅಸೋಸಿಯೇಷನ್, ವಕೀಲರ ಸಂಘದ ಪದಾಧಿಕಾರಿಗಳು, ಧರ್ಮರಾಜ್, ಸಾಮಾಜಿಕ ಹೇರಾಟಗಾರ ಹನುಮಂತ್ ಕಾಮತ್, ಗೋಪಾಲ್ ಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
Comments are closed.