ಕರಾವಳಿ

ಕುಂದಾಪುರದಲ್ಲಿ 2 ಕೋಟಿ ವೆಚ್ಚದಲ್ಲಿ ಮೀನು ಮಾರಾಟ ಮಳಿಗೆ, ಕೋಡಿಯಲ್ಲಿ ಮೀನುಗಾರಿಕಾ ಜಟ್ಟಿ; ಸಚಿವ ಕೋಟ

Pinterest LinkedIn Tumblr

ಕುಂದಾಪುರ : ಕುಂದಾಪುರದ ಸರ್ಕಾರಿ ಆಸ್ಪತ್ರೆಯನ್ನು ಕೊವಿಡ್‌ ಆಸ್ಪತ್ರೆಯನ್ನಾಗಿಸಿರುವುದರಿಂದ ಸಾಮಾನ್ಯ ಜನರ ಆರೋಗ್ಯ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಮೈ ಬಿಸಿಯಾದರೂ ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ಪರಿಪಾಠವಾಗಿರುವುದರಿಂದ ಕೊವಿಡ್‌ ಆಸ್ಪತ್ರೆಯನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಮನವಿ ಮಾಡಿಕೊಂಡರು.

ಪುರಸಭೆಯ ಡಾ.ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಚುನಾಯಿತ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಅವರು ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನಾ ಸಭೆ ನಡೆಸಿದರು.

ಚಂದ್ರಶೇಖರ್ ಖಾರ್ವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೇರೆ ಬೇರೆ ಕಡೆಗಳಿಂದ ಬರುತ್ತಿರುವವರ ಹಾಗೂ ಕೊವಿಡ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಕೊವಿಡ್‌ ಆಸ್ಪತ್ರೆ ತೆರೆಯಲಾಗಿದೆ. ಜನರಿಗೆ ಚಿಕಿತ್ಸೆ ನೀಡಲು ಬದಲಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇಲ್ಲಿ ಯೋಗ್ಯ ಚಿಕಿತ್ಸೆ ದೊರಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಕಳೆದ ಕೆಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಪುರಸಭೆಯ ಒಳ ಚರಂಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ತೊಡಕಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಮುಜರಾಯಿ ಹಾಗೂ ಮೀನುಗರಿಕಾ ಸಚಿವರು ತಾಕೀತು ಮಾಡಿದ್ದಾರೆ.

ಮನೆ ಮನೆಗೆ ನೀರಿನ ಸಂಪರ್ಕಕ್ಕಾಗಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ವಾರದೊಳಗೆ ಸಂಪರ್ಕ ನೀಡುವಂತೆ ಸೂಚಿಸಿದ ಸಚಿವರ ಮಾತಿಗೆ ಧ್ವನಿಗೂಡಿಸಿದ ಪುರಸಭೆಯ ಸದಸ್ಯ ಗಿರೀಶ್‌ ದೇವಾಡಿಗ, ಸ್ವಜಲಧಾರೆ ಯೋಜನೆಯಲ್ಲಿ ಅರ್ಜಿ ಹಾಕಿದವರಿಗೆ ಕೂಡಲೇ ಸಂಪರ್ಕ ನೀಡದೆ ಇಲ್ಲದೆ ಸಬೂಬು ಹೇಳಿ ಸತಾಯಿಸುತ್ತಿದ್ದಾರೆ. ಮನೆ ಹತ್ತಿರದಲ್ಲಿಯೇ ಪೈಪ್‌ ಲೈನ್‌ ಇದ್ದರೂ, ಸಂಪರ್ಕ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದ ಯುಜಿಡಿ ಕಾಮಗಾರಿ ನಡೆಯುತ್ತಿದ್ದರೂ ಅದಕ್ಕೊಂದು ತಾತ್ವಿಕ ಮುಕ್ತಾಯ ಕಂಡಿಲ್ಲ ಎಂದು ದೂರಿದ ಹಿರಿಯ ಸದಸ್ಯ ಕೆ.ಮೋಹನ್‌ದಾಸ್‌ ಶೆಣೈಯವರ ಮಾತಿಗೆ ಪ್ರತಿ ಸ್ಪಂದಿಸಿದ ಸಚಿವರು, ಸಮಸ್ಯೆಯನ್ನು ನಿವಾರಿಸಿಕೊಂಡು ನಿಗದಿತ ಕಾಲ ಮಿತಿಯೊಳಗೆ ಗುತ್ತಿಗೆ ಕಂಪೆನಿಯವರಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೀನುಗಾರ ಮಹಿಳೆಯರ ಸಾಲ ಮನ್ನಾ ಕುರಿತು ಸರ್ಕಾರ ಆದೇಶಿಸಿದ್ದರೂ, ಎಲ್ಲ ಮೀನುಗಾರ ಮಹಿಳೆಯರ ಸಾಲ ಮನ್ನಾ ಆಗಿಲ್ಲ ಎಂದು ಹೇಳಿದ ಪುರಸಭೆಯ ಸದಸ್ಯ ಚಂದ್ರಶೇಖರ ಖಾರ್ವಿಯವರಿಗೆ ಉತ್ತರಿಸಿದ ಸಚಿವರು 19 ಸಾವಿರ ಮೀನುಗಾರ ಮಹಿಳೆಯರ ಸಾಲ ಮನ್ನಾ ಆಗಿದೆ. 2–3 ದಿನಗಳ ಒಳಗೆ ಉಳಿದವರದ್ದೂ ಆಗಲಿದೆ. ಕುಂದಾಪುರದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರಾಟ ಮಳಿಗೆ, ಕೋಡಿಯಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣವಾಗಲಿದೆ. ನಗರದ ರಿಂಗ್‌ ರಸ್ತೆಯನ್ನು ಮೀನುಗಾರಿಕಾ ಇಲಾಖೆಯಡಿ ಸೇರಿಸಲು ಚಿಂತನೆ ನಡೆಸಲಾಗಿದೆ. ಕೊವಿಡ್‌ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ, ಸರ್ಕಾರ ಮೂಲಭೂತ ಅವಶ್ಯಕತೆಗಳಿಗೆ ಅನುದಾನ ನೀಡಿತ್ತುದ್ದು, ಇದರ ಉಪಯೋಗ ಜನರಿಗೆ ಸಿಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಿರುವವರಿಗೆ ಪ್ರಮಾಣ ಪತ್ರ ದೊರಕಿರುವುದರಿಂದ ಅವರುಗಳಿಗೆ ಕೌನ್ಸಿಲ್‌ ಸಭೆ ನಡೆಸಿ ನಿರ್ಣಯ ದಾಖಲಿಸಲು ಅವಕಾಶವಿಲ್ಲದೆ ಇದ್ದರೂ, ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿಗಳ ಕುರಿತು ಸಲಹೆ ನೀಡಬಹುದು. ಕೊವಿಡ್, ಮಲೇರಿಯಾ, ಡೆಂಗ್ಯು ಮುಂತಾದ ಜ್ವರಗಳ ರೋಗ ಲಕ್ಷಣಗಳು ಒಂದೇ ರೀತಿಯಲ್ಲಿ ಕಾಣುತ್ತಿರುವುದರಿಂದ ಪುರಸಭೆ ಸದಸ್ಯರು, ಜನರಿಗೆ ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗ ತಡೆಯಲು ಸಹಕಾರ ನೀಡುವಂತೆ ಅವರು ವಿನಂತಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Comments are closed.