ಕರಾವಳಿ

ದ.ಕ.ಜಿಲ್ಲೆ : ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

ಮಂಗಳೂರು ಜೂನ್ 21 : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಪ್ರತಿ ವರ್ಷದಂತೆ ಈ ವರ್ಷವು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುವ ಜೊತೆಗೆ ಕೋವಿಡ್ – 19 ವೈರಸ್‍ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಾಪಾಡುವ ದೃಷ್ಠಿಯಿಂದ ಪ್ರತಿ ಕೇಂದ್ರದ ಪ್ರತಿಯೊಂದು ಕೊಠಡಿಗಳನ್ನು ನಿತ್ಯವು ಸ್ಯಾನಿಟೈಸರ್ ಮಾಡುವುದು ಕಡ್ಡಾಯವಾಗಿದೆ.

ಪರೀಕ್ಷೆ ಕೇಂದ್ರದಲ್ಲಿ ಆರೋಗ್ಯ ಕೌಂಟರ್ ಸ್ಥಾಪಿಸಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನ್ ಮೂಲಕ ಪರೀಕ್ಷಿಸಿ ನಂತರದಲ್ಲಿ ಕೊಠಡಿಗೆ ತೆರಳಲು ಅವಕಾಶ ಮಾಡಿ ಕೋಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.

ಅವರು ನಗರದ ಕಪಿತಾನಿಯೋ ಪ್ರೌಢ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತೆ ಸಭೆಯಲ್ಲಿ ಆಧ್ಯಕ್ಷತೆ ವಹಿಸಿ ಪೂರ್ವ ಸಿಧ್ದತೆ ಕ್ರಮಗಳ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೊಷಕರು ಭಯ ಪಡುವ ಅಗತ್ಯವಿಲ್ಲ, ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದ್ದೇವೆ. ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ವಿದ್ಯಾರ್ಥಿಗಳು ಊಟ ಮತ್ತು ನೀರನ್ನು ಕಡ್ಡಾಯ ತೆಗೆದುಕೊಂಡು ಬರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಪಾಲಿಸುವ ಜೊತೆಗೆ ಕೋವಿಡ್ – 19 ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಕೊಠಡಿಗಳ ವ್ಯವಸ್ಥೆ, ಕೊರೋನಾ ರೋಗದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸದೇ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಬೇಕು. ಹಾಗೂ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಉಚಿತ ಬಸ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲೆಯ ಗಡಿ ಭಾಗದ ಮಕ್ಕಳು ಸಮಯಕ್ಕೆ ಸರಿಯಾಗಿ ಬರುವಂತೆ ಆಯಾ ಶಾಲೆಯ ಶಿಕ್ಷಕರು ಜವಾಬ್ದಾರಿ ವಹಿಸಬೇಕು. ಎಲ್ಲಾ ಕೊಠಡಿಗಳಿಗೂ ಜನರೇಟರ್, ಸಿ.ಸಿ.ಕ್ಯಾಮರಾ ಅವಳವಡಿಕೆ ಮಾಡುವ ಜೊತೆಗೆ ಶಾಲೆಯಲ್ಲಿ ಶೌಚಾಲಯ ಸ್ವಚ್ಛವಾಗಿರಬೇಕು ಎಂದು ತಿಳಿಸಿದರು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್‍ಗಳನ್ನು ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ಯಾವುದೇ ವಿದ್ಯಾರ್ಥಿಗೆ ಕೆಮ್ಮು,, ಶೀತ, ನೆಗಡಿ ಸೇರಿದಂತೆ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ವೈದ್ಯಾಧಿಕಾರಿಗಳ ದೃಢೀಕರಣದೊಂದಿಗೆ ಸಂಬಂಧಿಸಿದ ವಿದ್ಯಾರ್ಥಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಇದರ ಸಂಪೂರ್ಣ ಜವಾಬ್ದಾರಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರದ್ದು ಆಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಅವರು ಜಿಲ್ಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಈ ಬಾರಿ ಜಿಲ್ಲೆಯು ಉತ್ತಮ ಫಲಿತಾಂಶ ಸಾಧಿಸುವ ನಿರೀಕ್ಷೆ ಇದೆ. ಆದ್ದರಿಂದ ಪರೀಕ್ಷಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದರು.

ಸಭೆಯಲ್ಲಿ ಡಿಡಿಪಿಐ ಮಲೇಶ್ ಸ್ವಾಮಿ ,ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

Comments are closed.