ಕರಾವಳಿ

ಪಂಪ್‍ವೆಲ್‌ನಿಂದ ಪಡೀಲ್‌ವರೆಗಿನ ರಸ್ತೆ 26 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿ

Pinterest LinkedIn Tumblr

ಮಂಗಳೂರು ಜೂನ್ 06 : ಮಂಗಳೂರು ನಗರ ಪ್ರವೇಶಿಸುವ ಪ್ರಮುಖ ರಸ್ತೆ ಪಂಪ್‍ವೆಲ್ ನಿಂದ ಪಡೀಲ್‍ವರೆಗೆ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್‍ಸಿಟಿ ನಗರ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.

ಸುಮಾರು 2800 ಮೀಟರ್ ಉದ್ದದ ಈ ರಸ್ತೆಯ ಅಭಿವೃದ್ಧಿ ತುರ್ತು ಅಗತ್ಯವಾಗಿದ್ದು, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಇದಕ್ಕೆ ಅನುದಾನ ಕಾದಿರಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಪ್ಯಾಕೇಜ್‍ಗಳಲ್ಲಿ ಹಲವು ಕಡೆಗಳಲ್ಲಿ ರಸ್ತೆ ಅಗಲೀಕರಣ ಕಷ್ಟಸಾಧ್ಯವಾದ ಕಾರಣ ಸದರೀ ಕಾಮಗಾರಿಗಳಲ್ಲಿ ಉಳಿಕೆಯಾಗುವ ಮೊತ್ತದಲ್ಲಿ ಹೆಚ್ಚುವರಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲು ನಿರ್ಧರಿಸಲಾಯಿತು.

ಪಂಪ್‍ವೆಲ್‍ನಲ್ಲಿ ಪಿ.ಪಿ.ಪಿ. ಮಾದರಿಯಡಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಜುಲೈ 27ರವರೆಗೆ ಕಾಲಾವಕಾಶ ಇದೆ. ಸ್ಟೇಟ್‍ಬ್ಯಾಂಕ್ ಬಳಿ ಇರುವ ಸರ್ವೀಸ್ ಬಸ್ ನಿಲ್ದಾಣ ನವೀಕರಣ ಕಾಮಗಾರಿಯೂ ಅಗತ್ಯವಿದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲು ಸಂಸದರು ಸೂಚಿಸಿದರು.

ನಗರದ ಕ್ಲಾಕ್ ಟವರ್‍ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಏಕಮುಖ ರಸ್ತೆ ಪ್ರಾಯೋಗಿಕವಾಗಿ ಸಾಧುವಲ್ಲ ಎಂದು ತಿಳಿಸಿದ ನಳಿನ್ ಕುಮಾರ್, ಸ್ಟೇಟ್‍ಬ್ಯಾಂಕ್ ಮಾರ್ಕೆಟ್ ಪರಿಸರದಲ್ಲಿ ರಸ್ತೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಏಕಮುಖ ರಸ್ತೆಯಾದರೆ, ಸಂಚಾರ ಸಮಸ್ಯೆ ಇನ್ನಷ್ಟು ದಟ್ಟಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಿಂದ ಜೆಪ್ಪು ಮಹಾಕಾಳಿಪಡ್ಪು ನೇರ ರೈಲ್ವೇ ರಸ್ತೆ ಅಭಿವೃದ್ಧಿಗೆ ಈಗಿನ ಡಿಪಿಆರ್‍ನಲ್ಲಿ ಅಲ್ಪ ಮಾರ್ಪಾಡು ಮಾಡಿ, ಮುಂದುವರಿಸಲು ಸಂಸದರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಮಹಾನಗರಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಸ್ಮಾರ್ಟ್‍ಸಿಟಿ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Comments are closed.