ಕರಾವಳಿ

ಪ್ರಸಕ್ತ ಸನ್ನಿವೇಶದಲ್ಲಿ ಶಾಲೆಗಳ ಪುನರಾರಂಭ ಅಪಾಯಕಾರಿ : ಎಸ್ಡಿಪಿಐ

Pinterest LinkedIn Tumblr

ಮಂಗಳೂರು, ಜೂನ್.06: ಲಾಕ್ ಡೌನ್ ಸಡಿಲಿಕೆ ನಂತರ ದೇಶದಾದ್ಯಂತ ಸಾಂಕ್ರಾಮಿಕದ ಪೋಸಿಟಿವ್ ಪ್ರಕರಣಗಳು ವಿಪರೀತ ಏರಿಕೆ ಕಂಡಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಶಾಲೆಗಳನ್ನು ಜುಲೈ1ರಿಂದ ಪುನರಾರಂಭಿಸುವ ಚಿಂತನೆ ನಡೆಸುತ್ತಿರುವುದು ಅಪಾಯಕಾರಿಯಾಗಿದೆ.

ರಾಜ್ಯದಲ್ಲೂ ಸಾಂಕ್ರಾಮಿಕ ಪೀಡಿತರ ಸಂಖ್ಯೆ ದಿನೇದಿನೇ ವೃದ್ಧಿಯಾಗುತ್ತಿರುವುದರಿಂದ ಸದ್ಯಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಚಿಂತನೆ ತೀರಾ ಅವೈಜ್ಞಾನಿಕವೂ ಅತಾರ್ಕಿಕವೂ ಆಗಿರುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.

ಫ್ರಾನ್ಸ್, ಸ್ಪೇನ್, ಇಸ್ರೇಲ್ ಮುಂತಾದ ರಾಷ್ಟ್ರಗಳಲ್ಲಿ ಪುನರಾರಂಭಗೊಂಡ ಶಾಲೆಗಳಲ್ಲಿ ಹಾಜರಾದ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ತೀವ್ರ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿರುವ ಈ ದೇಶಗಳಲ್ಲಿ ಇಂತಹ ಸ್ಥಿತಿ ಉದ್ಭವವಾಗಿದೆ.

ನಮ್ಮ ರಾಜ್ಯದಲ್ಲಿನ ಶಾಲೆಗಳಿಗೆ ತೆರಳುವ ಮಕ್ಕಳನ್ನು ಬಸ್ಸುಗಳಲ್ಲಿ, ರಿಕ್ಷಾ-ವ್ಯಾನ್ ಗಳಲ್ಲಿ ತುಂಬಿಸಿ ಸಾಗಿಸುವುದು ಸಾಮಾನ್ಯವಾಗಿರುತ್ತದೆ. ಅಲ್ಲದೆ ವಿವಿಧ ಸಾಮಾಜಿಕ ಪರಿಸರಗಳಿಂದ ಬರುವ ಮಕ್ಕಳು ಶಾಲೆಗಳಲ್ಲಿ ಒಂದಾಗಿ ಸೇರಿಕೊಳ್ಳುವಾಗ ಸಾಂಕ್ರಾಮಿಕ ರೋಗದ ಅಪಾಯ ಹೆಚ್ಚುವ ಸಂಭವವಿದೆ.

ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕೋವಿಡ್ ಸಾಂಕ್ರಾಮಿಕ ಉಲ್ಬಣ ಸ್ಥಿತಿಯಿರುವಾಗ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಆತಂಕದ ಮನೋಭಾವನೆ ಮನೆ ಮಾಡಿರುತ್ತದೆ. ಇದರಿಂದ ಕಲಿಕೆಯಲ್ಲಿ ಪೂರ್ಣ ಶ್ರದ್ಧೆಯನ್ನು ಪಾಲಿಸುವುದು ಅಸಾಧ್ಯವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಇನ್ನು ಆಗಸ್ಟ್ ಕೊನೆಯವರೆಗೂ ಕಾದು ನೋಡಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಶಾಲೆಗಳ ಪುನರಾರಂಭದ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಬೇಕೆಂದು ಇಲ್ಯಾಸ್ ಮುಹಮ್ಮದ್ ತುಂಬೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Comments are closed.