ಮಂಗಳೂರು, ಜೂ.2: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರ್ ದೇವರಗುಡ್ಡೆ ಎಂಬಲ್ಲಿ ಮೇ 31ರಂದು ರಾತ್ರಿ ನಡೆದ ಎಕ್ಕಾರ್ ಸಮೀಪದ ಕರಂಬಾರು ನಿವಾಸಿ ಕೀರ್ತಿ ಯಾನೆ ಕೀರ್ತನ್(20) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಜ್ಪೆ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಳವಾರು ನಿವಾಸಿಗಳಾದ ಪ್ರಶಾಂತ್ ಯಾನೆ ಪಚ್ಚು, ಸುಹಾಸ್ ಶೆಟ್ಟಿ, ದೀಪೇಶ್, ಮೋಕ್ಷಿತ್ ಮತ್ತು ಧನರಾಜ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೇ 31ರಂದು ರಾತ್ರಿ ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ಎರಡು ತಂಡಗಳ ಮಧ್ಯೆ ತಲ್ವಾರ್ ದಾಳಿ ನಡೆದಿದ್ದು ಈ ಸಂದರ್ಭ ಕೀರ್ತನ್ ನನ್ನು ತಲವಾರಿನಿಂದ ಕಡಿದು ಹತ್ಯೆಗೈಯಲಾಗಿತ್ತು. ದಾಳಿಯಲ್ಲಿ ಕೀರ್ತನ್ ಜೊತೆಗಿದ್ದ ಅತನ ಸ್ನೇಹಿತರಾದ ನಿತಿನ್ ಪೂಜಾರಿ (20), ಮನೀಶ್ ಜೋಗಿ(20) ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದೆ..
ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಸಿಪಿ ಬೆಳಿಯಪ್ಪ ಹಾಗೂ ಬಜ್ಪೆ ಠಾಣಾ ಇನ್ ಸ್ಪೆಕ್ಟರ್ ನೇತ್ರತ್ವದಲ್ಲಿ ತನಿಖೆ ಮುಂದುವರಿದಿದ್ದು, ಉಳಿದವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಾಂಜಾ ದಂಧೆ ಕೂಲೆಗೆ ಕಾರಣವಾಯಿತೆ?
ಜೋಕಟ್ಟೆ ಕೇಂದ್ರಿಕೃತವಾಗಿ ನಡೀತಾ ಇರುವ ಗಾಂಜಾ ದಂಧೆ ಎಕ್ಕಾರು ಪರಿಸರದಲ್ಲಿ ಸಕ್ರಯವಾಗಿ ಕಾರ್ಯಾಚರಿಸುತ್ತಿದ್ದು, ಕೊಲೆಯಾದ ಕೀರ್ತನ್ ಹಾಗೂ ಮತ್ತಿತ್ತರರು ಇದೇ ದಂದೆಯಲ್ಲಿ ತೊಡಗಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಸಂಜೆಯಾಗುತ್ತಿದ್ದಂತೆ ದೇವರಗುಡ್ಡೆಯಲ್ಲಿ ಗಾಂಜಾದ ಅಮಲು ಅವರಿಸಿಕೊಳ್ಳುತ್ತಿದ್ದು, ಅಪ್ರಾಪ್ತ ವಿದ್ಯಾರ್ಥಿಗಳು ಕೂಡ ಗಾಂಜಾ ಅಮಲಿನಲ್ಲಿ ಸ್ಥಳೀಯವಾಗಿ ರೌಡಿಯಿಸಂ ಮಾಡುತ್ತಿದ್ದರು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ದಂದೆಯ ಹಿನ್ನೆಲೆಯಲ್ಲಿಯೇ ಈ ಘಟನೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.


Comments are closed.