ಕರಾವಳಿ

ಖ್ಯಾತ ನಟಿ ತಾರಾ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ಈ ವಿಶೇಷ ಅಥಿತಿಗಳ ಪರಿಚಯ ನಿಮಗಿದೆಯೇ? (EXCLUSIVE PHOTO)

Pinterest LinkedIn Tumblr

ಮಂಗಳೂರು, ಮೇ. 24 : ಕನ್ನಡದ ಖ್ಯಾತ ನಟಿ, ರಾಜಕಾರಣಿಯೂ ಆಗಿರುವ ತಾರಾ (ಅನುರಾಧಾ) ಅವರ ಜನ್ಮಾ ದಿನವನ್ನು ಕೆಲವು ದಿನಗಳ ಹಿಂದೆ ಅಂದರೆ, ಮಾರ್ಚ್ 4ರಂದು ಬೆಂಗಳೂರಿನ ಪ್ರತಿಷ್ಠಿತ ವಿಂಡ್ಸರ್ ಮ್ಯಾನಾರ್ ಹೊಟೇಲ್‌ನಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತೆಗೆದೆ ಅಪರೂಪದ (EXCLUSIVE) ಚಿತ್ರವನ್ನು ನಮ್ಮ ಸಿನಿ ಪ್ರೇಮಿಗಳಿಗೆ ಹಾಗೂ ನಮ್ಮೆಲ್ಲ ಓದುಗರಿಗಾಗಿ ಕನ್ನಡಿಗ ವರ್ಲ್ಡ್ ಇಂದಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

ಚಿತ್ರದಲ್ಲಿ ಕುಳಿತವರು, ಎಡದಿಂದ ಬಲಕ್ಕೆ, ಹಿರಿಯ ಹಾಗೂ ಪ್ರಸಿದ್ಧ ನಟಿಯರಾದ ಭಾರತೀ ವಿಷ್ಣುವರ್ಧನ್ (ಸಾಹಸ ಸಿಂಹ ವಿಷ್ಣುವರ್ಧನ್ ಪತ್ನಿ), ಬಹುಭಾಷ ನಟಿ ವಿನಯ ಪ್ರಸಾದ್, ಕನ್ನಡ ಸಿನಿಮಾದ ಜೊತೆಗೆ ತೆಲುಗು, ತಮಿಳಿನಲ್ಲೂ ಖ್ಯಾತರಾಗಿರುವ ಸುಮಿತ್ರ, ಶೈಲಾಶ್ರೀ (ಹಿರಿಯ ನಟ ಸುದರ್ಶನ್ ಅವರ ಧರ್ಮಪತ್ನಿ), ತಮ್ಮ ಮನೋಜ್ಞನ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಕಣ್ಣಲ್ಲೂ ನೀರು ಭರಿಸುವಲ್ಲಿ ಯಶಸ್ವಿಯಾಗಿರುವ ಖ್ಯಾತ ಪೋಷಕ ನಟಿ ಸರೋಜ ದೇವಿ, ಕೆಲವೊಮ್ಮೆ ಉತ್ತಮ ಗೃಹಿಣಿಯ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದರೆ, ಮತ್ತೆ ಕೆಲವು ಚಿತ್ರದಲ್ಲಿ ವಿಲನ್ ರೀತಿಯ ಅಭಿನಯದಿಂದ ಖ್ಯಾತರಾಗಿರುವ ಹೇಮಚೌದರಿ ಹಾಗೂ ಮಜಾ ವಿಥ್ ಸೃಜಾ ಖ್ಯಾತಿಯ ಸೃಜನ್ ಲೋಕೇಶ್ ತಾಯಿ ಹಾಗೂ ದಿವಂಗತ ಖ್ಯಾತ ನಟ ಲೋಕೇಶ್ ಅವರ ಪತ್ನಿ ಖ್ಯಾತ ಪೋಷಕ ನಟಿ ಗಿರೀಜಾ ಲೋಕೇಶ್.

ಇನ್ನು ನಿಂತಿರುವವರು, ಎಡದಿಂದ ಬಲಕ್ಕೆ, ಕೀರ್ತಿ ವಿಷ್ಣುವರ್ಧನ್ ( ದಿ.ಡಾ.ವಿಷ್ಣುವರ್ಧನ್ ಮಗಳು), ಸ್ಪರ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರೇಖಾ, ಚಾರ್ಲಿ ಚಾಪ್ಲಿನ್ ನನ್ನು ನೆನಪಿಸುವ ನಟ, ಒಂದು ಕಾಲದ ಖ್ಯಾತ ಹಾಸ್ಯ ನಟ ದಿ.ನರಸಿಂಹ ರಾಜು ಅವರ ಪುತ್ರಿ ಪೊಷಕ ನಟಿ ಸುಧಾ ನರಸಿಂಹ ರಾಜು, ನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ನಾಯಕಿ ನಟಿಯಾಗಿ ತದನಂತರ ಪೋಷಕ ನಟಿಯಾಗಿ, ಜೊತೆಜೊತೆಗೆ ನಿರ್ಮಾಪಕಿಯಾಗಿ, ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಜಲುಗಳನ್ನು ದಾಟಿ ಬಂದಿರುವ ಖ್ಯಾತ ನಟಿ, ನಿರ್ಮಾಪಕಿ, ನಿರ್ದೇಶಕಿ ವಿಜಯ ಲಕ್ಶ್ಮೀ ಸಿಂಗ್ ( ಕನ್ನಡದ ನಾಯಕ ನಟ ಹಾಗೂ ಖ್ಯಾತ ಪೋಷಕ ನಟ ಜೈಜಗದೀಶ್ ಪತ್ನಿ ), ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಬಳಿಕ ಅಕ್ಕ,ತಂಗಿಯ ಪಾತ್ರದಲ್ಲೇ ಬಹಳಷ್ಟು ಮಿಂಚಿರುವ ಖ್ಯಾತ ನಟಿ ಬರ್ತ್‌ಡೇ ಗರ್ಲ್ ತಾರಾ ಅಲಿಯಾಸ್ ಅನುರಾಧ, ಬಾಲ್ಯನಟಿಯಾಗಿ ಚಿತ್ರರಂಗ ಪ್ರವೇಶಿಸಿ ಬಳಿಕ ನಟಿಯಾಗಿ ಕನ್ನಡ ಚಿತ್ರರಂಗದ ಹಲವಾರು ದಿಗ್ಗಜ್ಜರ ಜೊತೆ ನಟಿಸುವ ಮೂಲಕ ಖ್ಯಾತಿ ಪಡೆದ ಒಂದು ಕಾಲದ ರಾಣಿ, ಸುಧಾರಾಣಿ, ಅಳುವನ್ನೆ ಬಂಡವಾಳನ್ನಾಗಿಸಿಕೊಂಡು ಶೃತಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅಳುಮುಂಜಿ ಪ್ರಿಯದರ್ಶಿನಿ ಬಳಿಕ ಶೃತಿಯಾಗಿ ಬದಲಾದ ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರಾಗಿ, ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ, ರೌಡಿಗಳ ಅಟ್ಟಹಾಸಕ್ಕೆ ಬಲಿಯಾಗಲೆಂದೆ ಮೀಸಲಾಗಿಟ್ಟವರಂತೆ, ಅಂತಹ ಪಾತ್ರಗಳೇ ಹೆಚ್ಚಾಗಿ ಲಭಿಸಿದರೂ ಕೊಟ್ಟಂತಹ ಪಾತ್ರಕ್ಕೆ ಜೀವ ತುಂಬುತ್ತಿದ್ದ ಖ್ಯಾತ ಪೋಷಕ ನಟಿ ತ್ರಿವೇಣಿ, ಹೆಚ್ಚು ಚಿತ್ರಗಳಲ್ಲಿ ನಟಿಸದಿದ್ದರೂ ತಮ್ಮ ಫ್ಯಾಮಿಲ್ ಬ್ಯಾಕ್ ರೌಂಡ್ ಹಿನ್ನೆಲೆ ಹಾಗೂ ತಮ್ಮ ನಟನಾ ಕೌಶಲ್ಯದಿಂದ ಬೆರಳೆಣಿಕೆಯ ಚಿತ್ರದಲ್ಲಿ ನಟಿಸಿದರೂ ಚಿತ್ರರಂಗದಲ್ಲಿ ನೆನೆಪಿಸುವ ವ್ಯಕ್ತಿತ್ವ ಹೊಂದಿರುವ ಪೂಜಾ ಲೋಕೇಶ್ ಹಾಗೂ ಕನ್ನಡದಲ್ಲಿ ಅಳುಮುಂಜಿ, ಗಂಡುಬೀರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಜೀವ ತುಂಬಿರುವ ಅನುಪ್ರಭಾಕರ್.

ಈ ದಿನ ನಮ್ಮ ಬರ್ತ್‌ಡೇ ಗರ್ಲ್ ತಾರಾ ಅನುರಾಧ ಬಗ್ಗೆ ಒಂದಿಷ್ಟು ಮಾಹಿತಿ :

ಖ್ಯಾತ ನಟಿ, ರಾಜಕಾರಣಿ, ತಾರಾ ಅವರ ಜನನ 4 ಮಾರ್ಚ್ 1973, ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.

ತಾರಾ (ಅನುರಾಧ) ಅವರು ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾತೃ ಹೃದಯದ ಹೆಣ್ಣಿನ ಪಾತ್ರಗಳಿಗೆ ತಾರಾ ಅನುರಾಧ ಜನಪ್ರಿಯರು. ತಾರಾ ಅನುರಾಧ 2008ರಲ್ಲಿ ಬಿಜೆಪಿ ಸೇರಿದ್ದರು. 2012ರಲ್ಲಿ ಪಕ್ಷ ಅವರಿಗೆ ವಿಧಾನಪರಿಷತ್ ಸದಸ್ಯರಾಗುವ ಅವಕಾಶ ನೀಡಿತ್ತು. 2018ರ ಆಗಸ್ಟ್ 8ರಂದು ಅವರು ಬಜೆಟ್ ಅಧಿವೇಶನದಲ್ಲಿ ವಿದಾಯದ ಭಾಷಣ ಮಾಡಿ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ವಿಧಾನ ಪರಿಷತ್ ಸದಸ್ಯೆಯಾದರೂ ತಾರಾ ಅವರು ನಟನೆಯನ್ನು ನಿಲ್ಲಿಸಲಿಲ್ಲ. 2017ನೇ ಸಾಲಿನ ಪ್ರತಿಷ್ಠಿತ 65ನೇ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ತಾರಾ ಅವರು ಅಭಿನಯಿಸಿರುವ ‘ಹೆಬ್ಬೆಟ್ ರಾಮಕ್ಕ’ ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ.

ತಾರಾಗೆ ಬಂದ ಪ್ರಶಸ್ತಿಗಳು
ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ – ಚಿತ್ರ – ‘ಹೆಬ್ಬೆಟ್ ರಾಮಕ್ಕ’
ಅತ್ಯುತ್ತಮ ನಟಿ – ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
ಅತ್ಯುತ್ತಮ ನಟಿ – ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕರಿಮಲೆಯ ಕಗ್ಗತ್ತಲು
ಅತ್ಯುತ್ತಮ ನಟಿ – ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಕಾನೂರು ಹೆಗ್ಗಡತಿ
ಅತ್ಯುತ್ತಮ ಪೋಷಕ ನಟಿ – ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
ಅತ್ಯುತ್ತಮ ಹಾಸ್ಯ ನಟಿ – ಚಿತ್ರ: ನಿನಗಾಗಿ

ವರದಿ : ಸತೀಶ್ ಕಾಪಿಕಾಡ್

ನಮ್ಮ ಓದುಗರಿಗಾಗಿ ಈ ಚಿತ್ರದಲ್ಲಿರುವ ನಟಿಯರಲ್ಲಿ ದಿನಾ ಒಬ್ಬರ ಬಗ್ಗೆ ಪ್ರತೀ ದಿನ ಮಾಹಿತಿ ಪ್ರಕಟವಾಗಲಿದೆ. ನಾಳೆ ಯಾರ ಬಗ್ಗೆ.. ನಿರೀಕ್ಷಿಸಿ..

Comments are closed.