ಕರಾವಳಿ

ಮಂಗಳೂರು: ಬೋಳೂರಿನ ಮಹಿಳೆಗೆ ಕೊರೋನ ಪಾಸಿಟಿವ್ ದೃಢ – ದ.ಕ.ಜಿಲ್ಲೆಯಲ್ಲಿ 22ಕ್ಕೇರಿದ ಸೋಂಕಿತರ ಸಂಖ್ಯೆ

Pinterest LinkedIn Tumblr

ಮಂಗಳೂರು, ಎಪ್ರಿಲ್.30: ದ.ಕ. ಜಿಲ್ಲೆಯಲ್ಲಿ ಗುರುವಾರ ಮತ್ತೊಂದು ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ನಗರದ ಬೋಳೂರು ನ್ಯಾಶನಲ್ ನ ಮಹಿಳೆಯಲ್ಲಿ ಕೊರೋನ ಸೋಂಕು ದೃಢಗೊಂಡಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ನ್ಯಾಶನಲ್ ನ ಸುಮಾರು 58 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ಸೋಂಕು ದೃಢಗೊಂಡಿದೆ ಎಂದು ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟ್‌ನಲ್ಲಿ ತಿಳಿಸಲಾಗಿದೆ.

ಬೋಳೂರು- ನ್ಯಾಶನಲ್ ನಿವಾಸಿ 58 ವರ್ಷದ ಮಹಿಳೆ ದ.ಕ.ಜಿಲ್ಲೆಯ ಕೊರೋನಾ ಹಾಟ್ ಸ್ಪಾಟ್ ಆಗಿರುವ ಮಂಗಳೂರಿನ ಕಣ್ಣೂರು ಸಮೀಪದ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಅನ್ಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಬಳಿಕ ಉಸಿರಾಟದ ತೊಂದರೆ ಉಂಟಾದ ಕಾರಣ ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.

ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಆಯಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಈ ಮಹಿಳೆಯನ್ನು ಉಪಚರಿಸುತ್ತಿದ್ದರು ಎನ್ನಲಾಗಿದೆ. ಪಿ.501 (ಆಯಾ)ರ ಸಂಪರ್ಕದಿಂದ ರೋಗ ತಗುಲಿದೆ. ಮಹಿಳೆಯಲ್ಲಿ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಬೋಳೂರು ಪರಿಸರದಲ್ಲಿ ಸೀಲ್‌ಡೌನ್ ಮಾಡಲಾಗಿದೆ.

ಬುಧವಾರ ರಾತ್ರಿಯಿಂದಲೇ ಇಲ್ಲಿ ಪೊಲೀಸರು ಬ್ಯಾರಿಕೇಡ ಅಳವಡಿಸಿ ಮುನ್ನೆಚ್ಚರಿಕೆ ವಹಿಸಿದ್ದರು. ಇದು ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಪತ್ತೆಯಾದ ಮೂರನೇ ಮತ್ತು ದ.ಕ. ಜಿಲ್ಲೆಯಲ್ಲಿ ಪತ್ತೆಯಾದ 22ನೇ ಪಾಸಿಟಿವ್ ಪ್ರಕರಣವಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

 

 

Comments are closed.