ರಾಷ್ಟ್ರೀಯ

ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕೊಂಡಾಡಿದ ಕುವೈತ್; ಮತ್ತೊಮ್ಮೆ ಕಳುಹಿಸಿಕೊಡುವಂತೆ ಮೋದಿಗೆ ಮನವಿ

Pinterest LinkedIn Tumblr

ಹೊಸದಿಲ್ಲಿ: ಕೊರೊನಾ ವೈರಸ್‌ ವಿರುದ್ದದ ಸಮರದಲ್ಲಿ ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕುವೈತ್ ದೇಶ ಕೊಂಡಾಡಿದೆ. ಮತ್ತಷ್ಟು ಇಂತಹ ವೈದ್ಯರ ತಂಡಗಳನ್ನು ತನ್ನ ದೇಶಕ್ಕೆ ಕಳಹಿಸಿಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಕುವೈತ್‌ ಲಿಖಿತವಾಗಿ ಮನವಿ ಸಲ್ಲಿಸಿದೆ.

ಇನ್ನೂ ಸಂಯುಕ್ತ ಅರಬ್ ಒಕ್ಕೂಟ(ಯುಎಇ)ವೂ ಸಹ ತನ್ನ ದೇಶಕ್ಕೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಭಾರತಕ್ಕೆ ಮನವಿ ಮಾಡಿದೆ. ಈ ಸಂಬಂಧ ಕೊಲ್ಲಿ ದೇಶಗಳಿಗೆ ನೆರವು ಕಲ್ಪಿಸಲು ಪ್ರಧಾನಿ ಮೋದಿ ತಾತ್ವಿಕವಾಗಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಡ್‌-19 ಸೋಂಕು ವಿರುದ್ಧದ ಹೋರಾಟದಲ್ಲಿ ಕುವೈತ್‌ಗೆ ಬೆಂಬಲ ನೀಡಲು ಪ್ರಧಾನಿ ಮೋದಿ 15 ಮಂದಿ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಸೇನಾ ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ಈ ಹಿಂದೆ ಕಳುಹಿಸಿದ್ದರು. ಈ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಕುವೈತ್‌ ಶ್ಲಾಘನೆಗೆ ಭಾಜನವಾಗಿತ್ತು.

ಭಾರತೀಯ ಸೇನೆಯ ವೈದ್ಯಕೀಯ ತಂಡದ ಕಾರ್ಯ ಅಲ್ಲಿನ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ವೈದ್ಯಕೀಯ ತಂಡ ತನ್ನ ಕಾರ್ಯ ಪೂರ್ಣಗೊಳಿಸಿ ಭಾರತಕ್ಕೆ ವಾಪಸ್ಸಾದ ಸ್ವಲ್ಪ ಸಮಯದಲ್ಲೇ ಕುವೈತ್‌ನಿಂದ ಭಾರತ ಸರ್ಕಾರಕ್ಕೆ ಮತ್ತೊಂದು ಮನವಿ ಬಂದಿದೆ. ಇನ್ನೂ ಕೆಲವು ವೈದ್ಯ ತಂಡಗಳನ್ನು ಕುವೈತ್‌ಗೆ ಕಳುಹಿಸಿಕೊಡಬೇಕೆಂದು, ಅಲ್ಲಿನ ಸರ್ಕಾರ ಅಧಿಕೃತವಾಗಿ ಕೋರಿದೆ.

ಇದೇ ಸಮಯದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ ಕೂಡಾ ಇದೇ ರೀತಿಯ ಮನವಿ ಭಾರತಕ್ಕೆ ಸಲ್ಲಿಸಿದೆ. ಮಾರಿಷಸ್, ಕ್ಯಾಮರೂನ್ ಮತ್ತಿತರ ದೇಶಗಳು ಸಹ ತಮಗೆ ಭಾರತೀಯ ವೈದ್ಯ ತಂಡದ ಸಹಾಯ ಅಗತ್ಯವಾಗಿದೆ ಎಂದು ಸರಕಾರಕ್ಕೆ ಮೌಖಿಕವಾಗಿ ಮನವಿ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಮೋದಿ ಈ ಮನವಿಗಳಿಗೆ ತಾತ್ವಿಕವಾಗಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.