ಕರಾವಳಿ

ಬಡತನ ನಿರ್ಮೂಲನೆ ಯೋಜನೆಯಾದ ಸಂಜೀವಿನಿ ಯೋಜನೆಯಡಿ ಬಟ್ಟೆಯ ಮಾಸ್ಕ್ ವಿತರಣೆ

Pinterest LinkedIn Tumblr

ಮಂಗಳೂರು ಏಪ್ರಿಲ್ 27 : ಸಂಜೀವಿನಿ ಎನ್.ಆರ್.ಎಲ್.ಎಂ. ಯೋಜನೆಯು ಗ್ರಾಮೀಣ ಮಹಿಳೆಯರ ಜೀವನೋಪಾಯ ಚಟುವಟಿಕೆಯ ಮೂಲಕ ಆರ್ಥಿಕ ಸಬಲೀಕರಣದ ಹಾಗೂ ಸ್ವಾವಲಂಭಿ ಜೀವನ ನಡೆಸಲು ಕೈಗೊಂಡ ಸರಕಾರದ ಮಹಾತ್ವಕಾಂಕ್ಷೆ ಬಡತನ ನಿರ್ಮೂಲನೆ ಯೋಜನೆಯಾಗಿದೆ.

ದೇಶದಲ್ಲಿ ಕೊರೋನಾ ಭೀತಿ ಪ್ರಾರಂಭವಾದಾಗಿನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳಿಗೆ ಬೇಡಿಕೆ ಅತೀ ಹೆಚ್ಚಿದೆ. ಗ್ರಾಮೀಣ ಜನತೆ ಹಾಗೂ ಕೊರೋನಾ ಸಂಧರ್ಭದಲ್ಲಿ ದುಡಿಯುವ ಸಿಬ್ಬಂದಿಗಳ ಪೂರೈಕೆ ಇಲ್ಲದೆ ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಮಾಸ್ಕ್‍ಗಳನ್ನು ತಯಾರಿಸುವ ಮೂಲಕ ಇಲ್ಲಿನ ಸಂಜೀವಿನಿ ಯೋಜನೆಯ ಸ್ವಸಹಾಯ ಗುಂಪುಗಳು ನಿಜಕ್ಕೂ ಸಂಜೀವಿನಿಯಾಗಿದೆ.

ಮಹಾಮಾರಿ ಕೊರೋನಾ ವೈರಸ್ ದೇಶವನ್ನೇ ತಲ್ಲಣಗೊಳಿಸಿದ್ದು ವೈರಾಣು ಹರಡುವಿಕೆಯನ್ನು ತಪ್ಪಿಸಲು ಎಲ್ಲೆಡೆ ಜನರು ಮಾಸ್ಕ್‍ಗಳ ಮೊರೆ ಹೋಗಿದ್ದಾರೆ. ಜಿಲ್ಲೆಯ ಹಲವು ಮೆಡಿಕಲ್‍ಗಳಲ್ಲಿ ನೋ-ಸ್ಟಾಕ್ ಬೋರ್ಡ್ ಕಾಣಿಸಿದರೆ, ಇನ್ನೂ ಕೆಲವು ಕಡೆ ಮಾಸ್ಕ್ ಮತ್ತು ಸ್ಯಾನಿಟೈಸರ್ ದುಬಾರಿ ಬೆಲೆಗೆ ಮರಾಟವಾಗುತ್ತಿದೆ.

ಭಯದ ವಾತಾವರಣದಲ್ಲಿ ದ.ಕ ಜಿಲ್ಲೆಯ ಸಂಜೀವಿನಿ ಎನ್.ಆರ್.ಎಲ್.ಎಂ. ಮಹಿಳಾ ಟೈಲರಿಂಗ್ ಘಟಕಗಳು ಸಾಮಾಜಿಕ ಬದ್ಧತೆ ಮೆರೆದಿದ್ದು ಅಗತ್ಯ ಮಾಸ್ಕ್ ತಯಾರಿಕೆಯ ಜವಾಬ್ದಾರಿಯನ್ನು ವಹಿಸಿದೆ. ಸಂಜೀವಿನಿ ಯೋಜನೆ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳ 58 ಸ್ವಸಹಾಯ ಗುಂಪುಗಳಿಂದ 560 ಮಹಿಳಾ ಸದಸ್ಯರು ಈವರೆಗೆ 16250 ಮಾಸ್ಕ್‍ಗಳನ್ನು ತಯಾರಿಸಿ ಸಾರ್ವಜನಿಕರು, ಗ್ರಾಮ ಪಂಚಾಯತ್, ಪೋಲಿಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಡಕುಟುಂಬಗಳು ಹಾಗೂ ಮೆಡಿಕಲ್ ಶಾಪ್ ಗಳಿಗೆ ಅತೀ ಕಡಿಮೆ ದರದಲ್ಲಿ ನೀಡಿದ್ದಾರೆ. ಕೆಲವೊಂದು ಕಡೆ ಉಚಿತವಾಗಿ ಸಾರ್ವಜನಿಕರಿಗೆ ಹಂಚಿದ್ದಾರೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆಯ ಸಹಯೋಗದೊಂದಿಗೆ ದ.ಕ ಜಿಲ್ಲಾಪಂಚಾಯತ್ ಯೋಜನಾ ನಿರ್ದೇಶಕ ಆರ್ ಮುಧುಕುಮಾರ್ ರವರ ಮಾರ್ಗದರ್ಶನದಂತೆ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‍ಗಳು ಅಗತ್ಯ ಬಟ್ಟೆಯನ್ನು ಒಕ್ಕೂಟಗಳಿಗೆ ಒದಗಿಸಿಕೊಟ್ಟಿದ್ದಾರೆ. ಮಹಿಳೆಯರಿಂದ ಮಾಸ್ಕ್‍ಗಳನ್ನು ಕಡಿಮೆ ದರದಲ್ಲಿ ಪಡೆದು ಬಡ ಕುಟುಂಬಗಳಿಗೆ ಉಚಿತವಾಗಿ ಹಂಚಿಕೆ ಮಾಡಿದ್ದಾರೆ ಎಂದು ದ.ಕ ಜಿಲ್ಲಾ ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.

Comments are closed.