ಕರಾವಳಿ

ಮಂಗಳೂರು : ರೆಡ್‌ಕ್ರಾಸ್‌ನಿಂದ ಪೌರಕಾರ್ಮಿಕರಿಗೆ ಮಾಸ್ಕ್, ಸೋಪ್ ವಿತರಣೆ

Pinterest LinkedIn Tumblr

 ಮಂಗಳೂರು, ಎಪ್ರಿಲ್.24 : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ವಿತರಿಸಲು 2000 ಮಾಸ್ಕ್, 120 ಬಾಟಲ್ ಸೆನಿಟೈಸರ್ ಹಾಗೂ 500 ಸಾಬೂನುಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚೇರ್‍ಮನ್ ಸಿ‌ಎ ಶಾಂತಾರಾಮ ಶೆಟ್ಟಿ ಅವರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಹೆಗ್ಡೆ ಶಾನಾಡಿ ಅವರಿಗೆ ಗುರುವಾರ ಹಸ್ತಾಂತರಿಸಿದರು.

ಈ ಸಂದರ್ಭ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ರೆಡ್‌ಕ್ರಾಸ್‌ನ ಪ್ರವೀಣ್, ಡಾ. ಜೆ. ಎನ್. ಭಟ್, ಮಹಾನಗರ ಪಾಲಿಕೆ ವೈದ್ಯಾಕಾರಿ ಡಾ. ಮಂಜಯ್ಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ ಶುಚಿತ್ವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಕಾರ್ಮಿಕರ ಸುರಕ್ಷತೆಗಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಈ ಸುರಕ್ಷತಾ ಕಿಟ್‌ನ್ನು ವಿತರಿಸಿದೆ.

ರೆಡ್‌ಕ್ರಾಸ್ ಸಂಸ್ಥೆಯು ಕೊರೊನಾ ತುರ್ತು ಸ್ಥಿತಿಯಲ್ಲಿ ತುರ್ತು ರಕ್ತದ ವ್ಯವಸ್ಥೆ, ಕಂಟ್ರೋಲ್ ರೂಮ್‌ನಲ್ಲಿ ಸೇವೆ, ಜಾಗೃತಿ ಅಂಗವಾಗಿ ನಗರದ ಪೊಲೀಸ್ ಬ್ಯಾರಿಕೇಟರ್‌ಗಳಲ್ಲಿ ಕೊರೊನಾ ಜಾಗೃತಿ ಸಂದೇಶದ ಸ್ಟಿಕ್ಕರ್ ಅಳವಡಿಕೆ, ವಲಸ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮುಂತಾದ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಿದೆ.

Comments are closed.