ಮಂಗಳೂರು, ಎಪ್ರಿಲ್.20 : ಕೊರೊನಾ ಸೋಂಕಿನಿಂದ ಬಾನುವಾರ ನಗರದ ವೆನ್‌ಲಾಕ್ ಆಸ್ಪತ್ರೆ ಯಲ್ಲಿ ಮೃತಪಟ್ಟ ಬಂಟ್ವಾಳ ಕೆಳಗಿನಪೇಟೆ ನಿವಾಸಿ ಮಹಿಳೆಯ ಶವವನ್ನು ಮಂಗಳೂರಿನ ಬೋಳೂರಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು ಸ್ಥಳೀಯರು ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಬೋಳೂರಿನ ಸ್ಮಶಾನದಲ್ಲಿ ಮೃತದೇಹವನ್ನು ದಹಿಸಿದರೆ ತಮಗೆ ತೊಂದರೆಯಾಗಬಹುದು ಎಂಬ ಭಯದಿಂದ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಬೋಳೂರು ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡು ಶವವನ್ನು ಅಲ್ಲೇ ವಿದ್ಯುತ್ ಶವಗಾರದಿಂದ ಸುಡಲಾಗಿದೆ. ಔಷಧಿಯೇ ಸಿಗದ ಮಾರಣಾಂತಿಕ ರೋಗಕ್ಕೆ ಬಲಿಯಾದ ರೋಗಿಯ ಮೃತದೇಹವನ್ನು ಜನವಸತಿ ಇಲ್ಲದ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಿಸದೆ ಜನಸಂದಣಿ ಇರುವ ಪ್ರದೇಶದಲ್ಲಿ ಸುಟ್ಟಿರುವ ಜಿಲ್ಲಾಡಳಿತದ ನಿರ್ಧಾರಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಬೋಳೂರು ಬಿಟ್ಟರೆ ಬೇರೆ ವಿದ್ಯುತ್ ಶವಗಾರವಿಲ್ಲ!
ಮಂಗಳೂರಿನಲ್ಲಿ ಬೋಳೂರು ಹೊರತುಪಡಿಸಿ ಬೇರೆಲ್ಲೂ ವಿದ್ಯುತ್ ಶವಾಗಾರವಿಲ್ಲ. ಈ ಕಾರಣದಿಂದ ಅಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ. ಬೇರೆ ಪ್ರಕರಣದಂತೆ ಮೃತದೇಹವನ್ನು ಮನೆಯವರಿಗೆ ಒಪ್ಪಿಸುವ ಹಾಗಿಲ್ಲ. ಹೀಗಾಗಿ ವಿದ್ಯುತ್ ಶವಾಗಾರದಲ್ಲಿ ಸುಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ರೋಗದ ಬಗ್ಗೆ ಮೊದಲೇ ಆತಂಕದಿಂದಿರುವ ಮಂಗಳೂರಿನ ಜನರು ಈ ಘಟನೆಯಿಂದಾಗಿ ಮತ್ತಷ್ಟು ಭಯಭೀತರಾಗಿರುವುದು ಸುಳ್ಳಲ್ಲ.

Comments are closed.