ಕುಂದಾಪುರ: ಐಸೋಲೆಟೆಡ್ ವಾರ್ಡಿನಲ್ಲಿ ಚಿಕಿತ್ಸೆ ನಿರಾಕರಿಸಿ ವಿದೇಶದಿಂದ ಆಗಮಿಸಿದ್ದ ಕರೋನಾ ಶಂಕಿತ ವ್ಯಕ್ತಿಯೊಬ್ಬರು ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿದೇಶದಿಂದ ಮರಳಿದ್ದ ವ್ಯಕ್ತಿ ಜ್ವರ, ತಲೆನೋವು ಸೇರಿದಂತೆ ಕೊರೋನಾ ಶಂಕೆಗಳಿರುವ ಕೆಲ ಸಮಸ್ಯೆಗಳಿಂದ ಬಳಲುತಗಯಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಹೊರರೋಗಿ ವಿಭಾಗದಿಂದ ಐಸೋಲೆಟೆಡ್ ವಾರ್ಡ್ ತೆರಳಲು ಸೂಚಿಸಿದಾಗ ತಗಾದೆ ತೆಗೆದ ವ್ಯಕ್ತಿ ಮಂಗಳೂರಿಗೆ ಹೋಗಬೇಕೆಂದು ಚಿಕಿತ್ಸೆಗೆ ನಿರಾಕರಿದ್ದರು.
ತಾಲೂಕು ಆಸ್ಪತ್ರೆಯ ಪಿಜಿಶಿಯನ್ ಡಾ. ನಾಗೇಶ್ ಹಾಗೂ ಸಿಬ್ಬಂದಿ ಮನ ಒಲಿಸುವ ಪ್ರಯತ್ನಕ್ಕೆ ಮುಂದಾದರೂ ಕೂಡ ಒಲ್ಲೆ ಎಂದ ವ್ಯಕ್ತಿ ಬಳಿಕ ಹೇಳದೇ ಕೇಳದೆ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ತಾಲೂಕು ಆಸ್ಪತ್ರೆ ಶಸ್ತ್ರ ಚಿಕಿತ್ಸಕರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿ ನೇಮಕ ಮಾಡುವುದು ಉತ್ತಮ
ವಿದೇಶದಿಂದ ಸ್ವದೇಶಕ್ಕೆ ಬರುವ ವ್ಯಕ್ತಿಗಳು ಆಸ್ಪತ್ರೆಗೆ ಬಂದು ಕೊರೋನಾ ವೈರಸ್ ಬಗ್ಗೆ ತಪಾಸಣೆ ಮಾಡಬೇಕಿದ್ದು ಕೆಲವು ವ್ಯಕ್ತಿಗಳು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕಿಳಿಯುವುದು ಮತ್ತು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸುತ್ತಿರುವ ಹಾಗೂ ಪರಾರಿಯಾಗುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಐಸೋಲೆಟೆಡ್ ವಾರ್ಡ್ ಇರುವ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಪೊಲೀಸ್ ನಿಯೋಜನೆ ಉತ್ತಮ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.