ಕರಾವಳಿ

ಕೊಲ್ಲೂರು ಜಾತ್ರೆಯಲ್ಲಿ ಆದೇಶ ಉಲ್ಲಂಘನೆ?- 9.30ಕ್ಕೆ ನಡೆಯಬೇಕಿದ್ದ ರಥೋತ್ಸವ 1 ಗಂಟೆಗೆ ನಡೆದಿದ್ಯಾಕೆ?

Pinterest LinkedIn Tumblr

ಕುಂದಾಪುರ: ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ಹಿನ್ನೆಲೆ ಸರಕಾರ ಎಚ್ಚರಿಕೆ ವಹಿಸುವಂತೆ ವಿವಿಧ ಆದೇಶಗಳನ್ನು ನೀಡಿದರೂ ಕೂಡ ಮುಜರಾಯಿ ಆಡಳಿತಕ್ಕೊಳಪಡುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ರಥೋತ್ಸವದಲ್ಲಿ ಸರಕಾರಿ ಆದೇಶ ಉಲ್ಲಂಘನೆಯಾಗಿದೆ‌.

ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿತ್ತು…..
ಪ್ರಸಿದ್ಧ ಕ್ಷೇತ್ರವಾಗಿರುವ ಕೊಲ್ಲೂರು ಶ್ರೀ‌ಮೂಕಾಂಬಿಕಾ ಕ್ಷೇತ್ರಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ‌. ಕೊರೋನಾ ಭೀತಿ ಹಿನ್ನೆಲೆ ದೇವಸ್ಥಾನಕ್ಕೆ ಒಂದು ವಾರ ಬರಬಾರದಾಗಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಇತ್ತೀಚೆಗೆ ಸೂಚನೆ ನೀಡಿದ್ದರು. ಆದರೆ ಅದರಲ್ಲಿ ಮಂಗಳವಾರ ನಡೆಯುವ ಜಾತ್ರೆಯ ಕುರಿತಾಗಿ ಯಾವುದೇ ಸ್ಪಷ್ಟ ಸೂಚನೆಯಾಗಲಿ ಮಾಹಿತಿಯಾಗಲಿ ಇರಲಿಲ್ಲ. ಆದರೆ ರಥೋತ್ಸವವನ್ನು ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಮಂಗಳವಾರ 10 ಗಂಟೆಯೊಳಗೆ ನಡೆಸಬೇಕು ಮತ್ತು ಸಾರ್ವಜನಿಕರು ಬರಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಸೋಮವಾರ ರಾತ್ರಿ ಆದೇಶಿಸಿದ್ದರು. ಇದೇ ನಿಟ್ಟಿನಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಬೈಂದೂರು ಸಿಪಿಐ ಸುರೇಶ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಕೊಲ್ಲೂರು ಆಯಕಟ್ಟಿನ ನಾಲ್ಕು ಕಡೆಗಳಲ್ಲಿ ಚೆಕ್ ಪೋಸ್ಟ್ ರಚಿಸಿ ಹೊರಭಾಗಗಳಿಂದ ಬರುವ ಭಕ್ತರು, ಸಾರ್ವಜನಿಕರನ್ನು ತಡೆದು ವಾಪಾಸ್ ಕಳಿಸುವ ಕಾರ್ಯ ಮಾಡಿದ್ದರು. ಆದರೆ ರಥೋತ್ಸವ ಪೂರ್ವಭಾವಿ ಪ್ರಕ್ರಿಯೆಗಳೇ 11.45ಕ್ಕೆ ಆರಂಭಗೊಂಡು ಮಧ್ಯಾಹ್ನ 1 ಗಂಟೆ ಬಳಿಕ ರಥೋತ್ಸವ ನಡೆದಿದ್ದು ಅಷ್ಟರಲ್ಲಾಗಲೇ ಸಾವಿರಾರು ಭಕ್ತರು ದೇವಳಕ್ಕೆ ಬರುವ ಮೂಲಕ ಆದೇಶ ಉಲ್ಲಂಘನೆಗೆ ಇಲ್ಲಿನ ಅವ್ಯವಸ್ಥೆ‌ ಕಾರಣವಾಯಿತು.

ಚ್ವಿಯಿಂಗಮ್ ತಂದ ಅವಾಂತರ..!?
ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತ್ತಗುಂಡಿ ಮಾತನಾಡಿ, ರಥೋತ್ಸವ ಸಂದರ್ಭ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ವಿಧಿವತ್ತಾಗಿ ನಡೆಯಬೇಕಿದ್ದರಿಂದ ರಥೋತ್ಸವ ವಿಳಂಭವಾಗಿದ್ದು ನಿಜ. ಅಲ್ಲದೇ ಬೆಳಿಗ್ಗೆ ದೇವಸ್ಥಾನದ ಪ್ರಾಂಗಣದಲ್ಲಿ ಯಾರೋ ಅಗಿದು ಬಿಟ್ಟ ಚ್ವಿಯಿಂಗಮ್ ಕಂಡಿದ್ದು ಇದು ಸರಿಯಲ್ಲ ಎಂಬ ನಿಟ್ಟಿನಲ್ಲಿ ಪ್ರಾಯಶ್ಚಿತ್ತ ಹೋಮವೂ ನಡೆಸಲಾಗಿತ್ತು. ಇದೂ ಕೂಡ ಉತ್ಸವ ವಿಳಂಬವಾಗಲು ಕಾರಣ ಹೊರತು ತಂತ್ರಿಗಳು, ಪುರೋಹಿತರು ಮತ್ತು ಆಡಳಿತ ಮಂಡಳಿ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಭೀತಿಯಲ್ಲೂ ಸಾವಿರಾರು ಭಕ್ತರು…..
9.30ಕ್ಕೆ ಸರಳವಾಗಿ ರಥೋತ್ಸವ ನಡೆಸಲು ಡಿಸಿ ಜಿ. ಜಗದೀಶ್ ಆದೇಶಿಸಿದ್ದರು. ಆದರೆ ಸಂಪ್ರದಾಯದ ಕಾರಣ ಮುಂದಿಟ್ಟುಕೊಂಡು ರಥೋತ್ಸವ ವಿಳಂಬ ಮಾಡಲಾಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಜನರಿಗೆ ನಿರ್ಬಂಧ ಹೇರಿದ್ದರೂ ಕೂಡ ರಥೋತ್ಸವ ತಡವಾಗಿ‌ ಕಾರಣ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವ ಕಣ್ತುಂಬಿಕೊಂಡರು. ಹಿರಿಯ ಭಕ್ತರೊಬ್ಬರು ಹೇಳುವ ಪ್ರಕಾರ ಕೊಲ್ಲೂರಿನಲ್ಲಿ ಮಧ್ಯಾಹ್ನ 1 ಗಂಟೆ ಬಳಿಕ ರಥೋತ್ಸವ ನಡೆಸಿದ್ದು ತಮಗೆ ತಿಳಿದಂತೆ ಇದೇ ಮೊದಲು ಎನ್ನುತ್ತಾರೆ.

ಜನರನ್ನು ವಾಪಾಸ್ ಕಳಿಸಲು ಪೊಲೀಸರ ಹರಸಾಹಸ…
ರಥೋತ್ಸವಕ್ಕೆ ಸಾರ್ವಜನಿಕರು ಬರಬಾರದು ಎಂದು ಸೂಚನೆ ಇದ್ದರೂ ರಾಜ್ಯದ ವಿವಿದೆಡೆಗಳಿಂದ ಮತ್ತು ಕೇರಳ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಒಟ್ಟು ನಾಲ್ಕು ಚೆಕ್ ಪೋಸ್ಟ್ ರಚಿಸಲಾಗಿತ್ತು. ಕೊಲ್ಲೂರು ಸಮೀಪ ಮಾಸ್ತಿಕಟ್ಟೆ ಸ್ವಾಗತ ಗೋಪುರ ಬಳಿ, ಹಾಲ್ಕಲ್ ಬಳಿ, ಕೊಲ್ಲೂರು ಸಮೀಪದ ದಳಿ ಹಾಗೂ ಇನ್ನೊಂದೆಡೆ ಬೆಳಿಗ್ಗೆನ ಜಾವ 5 ಗಂಟೆಗೆ ಚೆಕ್ ಪೋಸ್ಟ್ ರಚಿಸಿದ ಪೊಲೀಸರು ವಾಹನಗಳನ್ನು ತಡೆದು ಜನರನ್ನು ವಾಪಾಸ್ ಕಳಿಸುವ ಯತ್ನ ಮಾಡಿದರು. ರಥೋತ್ಸವ ಸಮಯ ವಿಳಂಭವಾದ ಹಿನ್ನೆಲೆ ಮಧ್ಯಾಹ್ನದವರೆಗೂ ಈ ಪ್ರಕ್ರಿಯೆ ನಡೆದಿದ್ದು ಸಾರ್ವಜನಿಕರು- ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ನಡೆಯಿತು. ಖುದ್ದು ಎಎಸ್ಪಿ ಹರಿರಾಂ ಶಂಕರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ವಿವಿಧ ಠಾಣೆಯ ಪಿಎಸ್ಐಗಳು ಸಾಥ್ ನೀಡಿದ್ದರು. ವಾಹನ ತಡೆದ ಹಿನ್ನೆಲೆ ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದ ಘಟನೆಯೂ ನಡೆಯಿತು.

ಮಾದರಿಯಾಗಬಹುದಿತ್ತು….ಆದರೆ?
ದೇವಸ್ಥಾನಗಳು ಎಂದಿಗೂ ಜನರಿಗೆ ಮಾದರಿಯಾಗಬೇಕು. ದೇವಾಲಯಗಳಲ್ಲಿ ಶಿಸ್ತು ನಿಯಮ ಜನರಿಗೆ ಪಾಠವಾಗಬೇಕು. ಕೊಲ್ಲೂರಿನಲ್ಲಿ ಈ ಬಾರಿ ಜಾತ್ರೆ ಸಂಪ್ರದಾಯಬದ್ಧವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಉತ್ಸವ ಸರಳವಾಗಿ ನಡೆದಿದ್ದರೆ ದೇವಸ್ಥಾನ ರಾಜ್ಯಕ್ಕೆ ಮಾದರಿಯಾಗುವುದಿತ್ತು. ಆದರೆ ಕೆಲ ಪ್ರತಿಷ್ಟೆಗಳು ಇಲ್ಲಿ ತಮ್ಮದೇ ಸಮಯಕ್ಕೆ ರಥೋತ್ಸವ ನಡೆಸುವ ಹುನ್ನಾರ ಮಾಡಿದೆ ಎಂದು ಹೆಸರನ್ನು ಹೇಳಲು ಇಚ್ಚಿಸದ ಭಕ್ತರೊಬ್ಬರು ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಇಂದು ಮಾದರಿ ಜಾತ್ರೆಯ ಜೊತೆಗೆ ಭಕ್ತಾಧಿಗಳಿಗೂ ಸಮಸ್ಯೆಯಾಗುವುದು ತಪ್ಪುತ್ತಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.