ಕುಂದಾಪುರ: ಬೆಂಗಳೂರು ಗ್ರಾಮಾಂತರ ಮೂಲದ ಬೇರೆ ಬೇರೆ ವಿವಾಹದ ಬಳಿಕವೂ ಪ್ರೇಮಿಗಳಾಗಿದ್ದ ಮಹಿಳೆ ಹಾಗೂ ಪುರುಷ ಕುಂದಾಪುರದ ಕೋಡಿ ಸಮುದ್ರ ಕಿನಾರೆ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಹನುಮಂತನಗರದ ವಿವಾಹಿತ ಇಬ್ಬರು ಮಕ್ಕಳ ತಂದೆಯಾಗಿರುವ ರಮೇಶ್ (45) ಹಾಗೂ ವಿವಾಹಿತೆ ಹಾಗೂ ಮಕ್ಕಳಿರುವ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದವರು. ಇಬ್ಬರು ವಿವಾಹಿತರಾಗಿದ್ದರೂ ಕೂಡ ಪರಸ್ಪರ ಪ್ರೇಮಿಸುತ್ತಿದ್ದರು ಎನ್ನಲಾಗುತ್ತಿದ್ದು ಮಹಿಳೆಯ ಪತಿಯ ಸ್ನೇಹಿತ ರಮೇಶ್ ಎಂದು ಹೇಳಲಾಗುತ್ತಿದೆ.

ಇನ್ನೋವಾ ಕಾರಿನಲ್ಲಿ ಕೋಡಿಗೆ ಬಂದಿದ್ದ ಇವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ನರಳಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಂಬುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಕುಂದಾಪುರ ಆಸ್ಪತ್ರೆಯಲ್ಲಿ ಪಿಜಿಶಿಯನ್ ಡಾ. ನಾಗೇಶ್ ಅವರು ಇಬ್ಬರಿಗೂ ಚಿಕಿತ್ಸೆ ನೀಡುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಸೇವಿಸಿದ ವಿಷ ಅಥವಾ ಮಾತ್ರೆ ಯಾವುದು ಇನ್ನಷ್ಟೆ ತಿಳಿದುಬರಬೇಕಿದ್ದು ತೀವೃ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಸಂಜೆ ವೇಳೆಗೆ ಇಬ್ಬರ ಕುಟುಂಬಿಕರು ಆಗಮಿಸುವ ಸಾಧ್ಯತೆಯಿದೆ.
ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಾವ ಕಾರಣಕ್ಕೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬುದು ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.
Comments are closed.