ಮಂಗಳೂರು :ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಡೇ-ನಲ್ಮ್ ಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಮಂಗಳೂರು ಮಹಾನಗರಪಾಲಿಕೆಯ ಉಪ ಮಹಾ ಪೌರರು ವೇದಾವತಿ ಯಾನೆ ಜಾನಕಿ, ಇವರು ಜ್ಯೋತಿ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ, ಹೆಣ್ಣು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು, ತನ್ನಲ್ಲಿರುವ ಪ್ತತಿಭೆಯನ್ನು ಪ್ರದರ್ಶಿಸಿ ವಿಶ್ವಮಟ್ಟದಲ್ಲಿ ಗೌರವ ಪಾತ್ರವಾಗುತ್ತಿದ್ದಾಳೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರ್ಪೋರೇಟರ್ ಶಕೀಲಕಾವಾ, ಇಡೀ ಪ್ರಪಂಚದಲ್ಲೇ ಮಹಿಳೆಯರಿಗೆ ಗೌರವ ಸ್ಥಾನ ನೀಡುವುದು ನಮ್ಮ ಭಾರತ ಮಾತ್ರ. ಮಹಿಳೆಯರು ಈ ದೇಶದ ಆಸ್ತಿ. ನಾವೆಲ್ಲರೂ ನಮ್ಮೊಳಗಿನ ಅಂತಃಶಕ್ತಿಯನ್ನು ಗುರುತಿಸಿಕೊಂಡು, ನಮ್ಮನ್ನು ನಾವು ಬಲಿಷ್ಠಗೊಳಿಸಿಕೊಂಡು ಪ್ರತಿಯೊಬ್ಬರಿಗೂ ಮಾದರಿಯಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾದ ಮಂಜುಳ ಸನೀಲ್ ಲಿಂಗ ತಾರತಮ್ಯ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅನ್ನೋದರ ಕುರಿತು ಮಾಹಿತಿಗಳನ್ನು ನೀಡಿದರು. ಸ್ವ-ಸಹಾಯ ಗುಂಪಿನ ಉತ್ತೇಜನದಿಂದಾಗಿ ಯಶಸ್ಸಿನ ಮಹಿಳೆಯಾಗಿ ಹೊರ ಹೊಮ್ಮಿದ ಡಾ.ಸಂಶದ್ದ್ ಮತ್ತು ಕ್ರೀಡಾಪಟು ನಿರ್ಮಲ ಯೆಯ್ಯಾಡಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕುರಿತಾದ ಪ್ರತಿಜ್ಞಾ ವಿಧಿ ಯನ್ನು ಎಲ್ಲರಿಗೂ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಮತ್ತು ಉಪ ಆಯುಕ್ತರು ಡಾ.ಸಂತೋಷ ಕುಮಾರ್ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಡೇ-ನಲ್ಮ್ ಕಾರ್ಯಕ್ರಮದ ನಗರ ಅಭಿಯಾನ ವ್ಯವಸ್ಥಾಪಕ ಎನ್ ಚಿತ್ತರಂಜನ್ ದಾಸ್ ಮತ್ತು ಮಂಗಳೂರು ಮಹಾನಗರಪಾಲಿಕೆಯ ಸಮುದಾಯ ಸಂಘಟಕರು ಉಪಸ್ಥಿತರಿದ್ದರು.

Comments are closed.