ಕರಾವಳಿ

ತೊಕ್ಕೊಟ್ಟು :ಮದುವೆ ಹಾಲ್‌ನ ಲಿಫ್ಟ್‌ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತ್ಯು- ಹಾಲ್ ಮಾಲಕರ ವಿರುದ್ಧ ವ್ಯಾಪಕ ಆಕ್ರೋಷ

Pinterest LinkedIn Tumblr

ಮಂಗಳೂರು, ಮಾರ್ಚ್.01: ಮದುವೆ ಹಾಲ್‌ನ ಲಿಫ್ಟ್ ಕೆಟ್ಟುಹೋದ ಪರಿಣಾಮ ವ್ಯಕ್ತಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ರವಿವಾರ ತೊಕ್ಕೊಟ್ಟು ಸಮೀಪದ ಕಲ್ಲಾಪುನಲ್ಲಿ ನಡೆದಿದೆ.

ತುಂಬೆ ಸಮೀಪದ ವಳವೂರಿನ ಹಂಝ (30) ಮೃತಪಟ್ಟವರು. ಕುದ್ರೋಳಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಂಝ ಅವರು ಇಂದು ರಾ.ಹೆ. 66ರ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸ ಮಾಡಲು ಬಂದಿದ್ದರು ಎನ್ನಲಾಗಿದೆ.

ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಹಾಲ್‌ನ ಮೂರನೇ ಮಹಡಿಯಿಂದ ಸಾಮಗ್ರಿಗಳನ್ನು ಲಿಫ್ಟ್‌ನಲ್ಲಿ ಹಾಕಿ ಕೆಳಗೆ ಬರಲು ಸಿದ್ಧತೆ ನಡೆಸುತ್ತಿದ್ದ ಈ ವೇಳೆ ಲಿಫ್ಟ್‌ನ ರೋಪ್ ಸಡಿಲಗೊಂಡ ಪರಿಣಾಮ ಆಯ ತಪ್ಪಿ ಬಿದ್ದ ಹಂಝ ಅವರು ಲಿಫ್ಟ್‌ನೊಳಗೆ ಸಿಲುಕಿದರು. ಕೂಡಲೇ ಗಾಯಗೊಂಡ ಹಂಝ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಹಾಲ್ ಮಾಲಕರ ವಿರುದ್ಧ ಆಕ್ರೋಶ : ಪ್ರತಿಭಟನೆ

ಇದೇ ವೇಳೆ ಹಾಲ್‌ನ ಕಳಪೆ ಲಿಫ್ಟ್‌ನ ಕಾರಣದಿಂದ ಒಂದು ಸಾವು ಸಂಭವಿಸಿದರೂ ಕಲ್ಲಾಪು ಯುನಿಟಿ ಹಾಲ್‌ನ ಮಾಲಕರು ಮೃತರ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇದ್ದ ಕಾರಣ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಮುಂಭಾಗ ಹಲವಾರು ಮಾಲಕರ ವಿರುದ್ಧ ಪ್ರತಿಭಟನೆ ನಡೆಸಿದರು.

Comments are closed.