ಮಂಗಳೂರು/ ಉಳ್ಳಾಲ: ವೀರ ರಾಣಿ ಅಬ್ಬಕ್ಕ ನಾಡಿನ ಹೋರಾಟದ ದೊಡ್ಡ ಶಕ್ತಿ ಯಾಗಿದ್ದು, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಆಕೆಯಲ್ಲಿ ವೈರಿಗಳ ತಂತ್ರಕ್ಕೆ ಪ್ರತಿತಂತ್ರ ಮಾಡುವ ಜಾಣತನ, ಸೂಕ್ಷ್ಮಗ್ರಹಿಕೆ ಇತ್ತು. ತನ್ನ ಪ್ರಜೆಗಳಿಗೆ ಅನ್ಯಾಯವಾದಾಗ ಯಾವುದೇ ಪ್ರಚಾರವಿಲ್ಲದ ದೂರಗಾಮಿ ಕಲ್ಪನೆ, ಲಯಬದ್ಧವಾದ ಯೋಚನೆ, ಸ್ವಾಭಿಮಾನದ ಕಿಚ್ಚು ಹಚ್ಚಿಸಿದ ಪರಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು ಎಂಬುದನ್ನು ಇತಿಹಾಸಕಾರರ ಲೇಖನದಿಂದ ಅರಿತುಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ 2019-20 ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ಬಕ್ಕ ಉತ್ಸವ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವುದು ಸರಕಾರಕ್ಕೆ ಗೌರವ. ಅಬ್ಬಕ್ಕ ಹೆಸರಿನಲ್ಲಿ ವೀರ ರಾಣಿ ಅಬ್ಬಕ್ಕ ಉತ್ಸವ ಒಂದು ಅಚ್ಚುಕಟ್ಟಾದ ಕಾರ್ಯಕ್ರಮ. ಪ್ರಶಸ್ತಿಗಾಗಿ ಬಡಿದಾಡುವ ಈ ಕಾಲಘಟ್ಟದಲ್ಲಿ ಕೇಂದ್ರ ಸರಕಾರ ತುಳಸಿ ಗೌಡ ಹಾಗೂ ಹರೇಕಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.
ಕಾಡು, ಗಿಡ ಬಳ್ಳಿ ತೊರೆಯ ನಡುವೆ ಬದುಕಿದ ತುಳಸಿ ಗೌಡ ಅವರು ಬದುಕಿಗಾಗಿ ಬಡಿದಾಡಿದ ತಾರ್ಕಿಕ ಗುರಿ ಹೊಂದಿದವರು. ಹಾಗೂ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಪದ್ಮಶ್ರೀ ಪಾತ್ರರಾಗಿರುವುದು, ರಾಣಿ ಅಬ್ಬಕ್ಕಳ ಹೆಸರಿನಲ್ಲಿ ನಡೆಯುವ ಉತ್ಸವದಲ್ಲಿ ಉಪಸ್ಥಿತರಿರುವುದು ನಿಜಕ್ಕೂ ಉತ್ಸವದ ಮೆರುಗು ಹೆಚ್ಚಿಸಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ದಯಾನಂದ ಕತ್ತಲ್ ಸಾರ್ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳುಭಾಷೆ ಸೇರ್ಪಡೆ ಆಗಲೇಬೇಕು. ಕರ್ನಾಟಕದಲ್ಲಿ ತುಳು ಅಧಿಕೃತ ರಾಜ್ಯಭಾಷೆ ಆಗಲೇಬೇಕು ಎಂಬ ಹೋರಾಟಕ್ಕೆ ಬೆಂಬಲಿಸಬೇಕು ಎಂದು ನುಡಿದರು.
ಶಾಸಕ ಯು.ಟಿ. ಖಾದರ್ ಐತಿಹಾಸಿಕವಾಗಿ ದಕ್ಷಿಣ ಕನ್ನಡ ಹಿಂದೆ ಮದರಾಸು ಪ್ರಾಂತ್ಯವಾಗಿದ್ದ ಕಾರಣ ಉತ್ತರದ ರಾಣಿಯರಿಗೆ ಸಿಕ್ಕಂತೆ ದಕ್ಷಿಣ ಭಾಗದ ಉಳ್ಳಾಲದ ರಾಣಿಯ ಕುರಿತು ಹೆಚ್ಚು ಉತ್ಸುಕರಾಗಿರದ ಕಾರಣ ಅಬ್ಬಕ್ಜಳಿಗೆ ಆ ಕಾಲದಲ್ಲಿ ಹೆಚ್ಚು ಪ್ರಚಾರ ಸಿಗಲಿಲ್ಲ. ಅಬ್ಬಕ್ಕ ಉತ್ಸವಕ್ಕೆ ಪ್ರಪ್ರಥಮವಾಗಿ ಅಂದಿನ ಮುಖ್ಯಮಂತ್ರಿ ಯಡ್ಯೂರಪ್ಪ ಅವರು 25ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಹಂತ ಹಂತವಾಗಿ ಅನುದಾನ ಬಿಡುಗಡೆ ಆಗುತ್ತಿರುವುದರಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದರು.
ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ವಂದಿಸಿದರು.ಕಾರ್ಯಕ್ರಮದಲ್ಲಿ ಅಬ್ಬಕ್ಕ ಉತ್ಸವ ಅಧಿಕೃತ ಲಾಂಛನ ಅನಾವರಣಗೊಳಿಸಲಾಯಿತು.
ಅಬ್ಬಕ್ಕ ಉತ್ಸವಕ್ಕೂ ಮುನ್ನ ಉಳ್ಳಾಲ ಅಬ್ಬಕ್ಕ ಸರ್ಕಲ್ ನಲ್ಲಿ ಅಬ್ಬಕ್ಕಳ ಪುತ್ಥಳಿಗೆ ಶಾಸಕ ಯು.ಟಿ. ಖಾದರ್ ಮಾಲಾರ್ಪಣೆ ಮಾಡಿದರು.
ದೇರಳಕಟ್ಟೆಯಿಂದ ಅಸೈಗೋಳಿಯ ಉತ್ಸವ ವೇದಿಕೆಗೆ ಹೊರಟ ಸಾಂಸ್ಕೃತಿಕ ಮೆರವಣಿಗೆಗೆ ಶಾಸಕ ಖಾದರ್ ಚಾಲನೆ ನೀಡಿದರು.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್ ಜಿ. ತಹಶೀಲ್ದಾರ್ ಗುರುಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



Comments are closed.