ಕರಾವಳಿ

ಕೋಟ ಡಬ್ಬಲ್ ಮರ್ಡರ್ ಕೇಸ್: ಆರೋಪಿ ರಾಘವೇಂದ್ರ ಕಾಂಚನ್ ಕುಂದಾಪುರ ಕೋರ್ಟಿಗೆ ಶರಣು

Pinterest LinkedIn Tumblr

ಉಡುಪಿ: ಕಳೆದ ವರ್ಷ ಕೋಟ ಸಮೀಪದ ಮಣೂರಿನಲ್ಲಿ ನಡೆದ ಭರತ್ ಮತ್ತು ಆತನ ಸ್ನೇಹಿತ ಯತೀಶ್ ಕೊಲೆ ಪ್ರಕರಣದಲ್ಲಿ ಕೊಲೆಯ ಸಂಚು ರೂಪಿಸಿದ ಆರೋಪ ಹೊತ್ತಿರುವ ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿದ್ದು ಇಂದು ರಾಘವೇಂದ್ರ ಕಾಂಚನ್ ಕುಂದಾಪುರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಕುಂದಾಪುರದ ಜಿಲ್ಲಾ ಮತ್ತು ಹಚ್ಚುವರಿ ಸತ್ರ ನ್ಯಾಯಾಲಯಕ್ಕೆ ಇಂದು (ಶುಕ್ರವಾರ) ಬೆಳಿಗ್ಗೆ ವಕೀಲರ ಮೂಲಕ ಆಗಮಿಸಿದ ರಾಘವೇಂದ್ರ ಕಾಂಚನ್ ಶರಣಾಗತಿಯಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಹಿರಿಯಡಕ ಕಾರಾಗೃಹಕ್ಕೆ ರವಾನಿಸಲಾಗಿದೆ.

ಕಳೆದ ವರ್ಷ ಜನವರಿ 26ರಂದು ರಾತ್ರಿ ಸುಮಾರು 10.30ರ ಸುಮಾರಿಗೆ ಭರತ್ ಮತ್ತು ಆತನ ಸ್ನೇಹಿತ ಯತೀಶನನ್ನು ಕೊಲೆ ಮಾಡಲಾಗಿತ್ತು. ಟಾಯ್ಲೆಟ್ ಪಿಟ್ ವಿಚಾರದಲ್ಲಿ‌ ನಡೆದಿತ್ತೆನ್ನಲಾದ ಈ ಕೊಲೆಯನ್ನು ಹರೀಶ್ ರೆಡ್ಡಿ ಸೋದರರು ಮತ್ತು ಇತರ ಆರೋಪಿಗಳು ಸೇರಿ ಮಾಡಿದ್ದು ಅಂದಿನ ಪೊಲೀಸ್ ವರಿಷ್ಠಾಧಿಕಾರಿಯವರಾದ ಲಕ್ಷ್ಮಣ್ ನಿಂಬರ್ಗಿಯವರು ಇದರಲ್ಲಿ ಭಾಗಿಯಾದ 18 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯನಾದ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು, ಈ ಬಗ್ಗೆ ಭರತ್ ತಾಯಿ ಪಾರ್ವತಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ನೀಡಿದ ಜಾಮೀನು ವಜಾಗೊಳಿಸಿ ಆದೇಶಿಸಿತ್ತು.

ರಾಘವೇಂದ್ರ ಕಾಂಚನ್’ನ್ನು ಬಂಧಿಸುವಂತೆ ನ್ಯಾಯಾಲಯವು ಕೋಟ ಪಿಎಸ್ಐ ಅವರಿಗೆ ಆದೇಶಿಸಿದ್ದು ರಾಘವೇಂದ್ರ ಕಾಂಚನ್ ತಲೆಮರೆಸಿಕೊಂಡಿದ್ದರಿಂದ ಪೊಲೀಸರು ಆತನಿಗಾಗಿ ಸತತ ಹುಡುಕಾಟ ನಡೆಸಿದ್ದರೂ ಕೂಡ ಆತ ಪತ್ತೆಯಾಗಿರಲಿಲ್ಲ. ಇಂದು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮೂಲಕ ನ್ಯಾಯಾಲಯಕ್ಕೆ ಶರಣಾಗತಿಯಾಗಿದ್ದು ಈ ಸಂದರ್ಭ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಕೋಟ ಪಿಎಸ್ಐ ನಿತ್ಯಾನಂದ ಗೌಡ ಮೊದಲಾದವರು ಇದ್ದರು.

ಉಪವಾಸ ಸತ್ಯಾಗ್ರಹ ಎಚ್ಚರಿಕೆ!
ಸುಪ್ರೀಂ ಕೋರ್ಟ್ ಜಾಮೀನು ವಜಾಗೊಳಿಸಿದ ಬೆನ್ನಲ್ಲೆ ರಾಘವೇಂದ್ರ ಕಾಂಚನ್ ತಲೆಮರೆಸಿಕೊಂಡಿದ್ದು ಆರೋಪಿಯನ್ನು ರಾಜಕೀಯ ಒತ್ತಡದಿಂದ ಪೊಲೀಸರು ಬಂಧಿಸಿಲ್ಲ ಎಂದು ಕೊಲೆಯಾದ ಯುವಕರ ಕುಟುಂಬಿಕರು ಆರೋಪಿಸಿದ್ದರು. ಅಲ್ಲದೆ ಫೆ.7ರೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಉಡುಪಿ ಎಸ್ಪಿ ಕಚೇರಿಯೆದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ಕೂಡ ನೀಡಿದ್ದರು.

Comments are closed.