ಕರಾವಳಿ

ಫೆಬ್ರವರಿ,7-9 : ಮಂಗಳೂರಿನಲ್ಲಿ ಎಬಿವಿಪಿ 39ನೇ ರಾಜ್ಯ ಸಮ್ಮೇಳನ 

Pinterest LinkedIn Tumblr

ಮಂಗಳೂರು: ಎಬಿವಿಪಿ ವತಿಯಿಂದ ಪ್ರತಿ ವರ್ಷ ನಡೆಸುವ ರಾಜ್ಯಮಟ್ಟದ ‘ವಿದ್ಯಾರ್ಥಿ ಸಮ್ಮೇಳನ’ ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಯ ಪ್ರಮುಖ ಭಾಗಗಳಲ್ಲೊಂದು. ಈ ಹಿನ್ನಲೆಯಲ್ಲಿ ರಚನಾತ್ಮಕ, ಕ್ರಿಯಾಶೀಲ ಚಟುವಟಿಕೆಗೆ ಪ್ರೇರಣಾದಾಯಿ ಯಾಗಿರುವ ಶೈಕ್ಷಣಿಕ ವಲಯದ ನಾವೀನ್ಯತೆಗೆ ತನ್ನದೇ ಕೊಡುಗೆ ನೀಡುತ್ತಿರುವ ಮಂಗಳೂರಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಸಮ್ಮೇಳನ ಫೆಬ್ರವರಿ 7, 8, 9ರಂದು ಕುದ್ಮುಲ್ ರಂಗರಾವ್ ಸಭಾಂಗಣ(ಪುರಭವನ)ದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ನಾಯಕ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಸಾಯಂಕಾಲ 4ಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಮ್ಮೇಳನ ಉದ್ಘಾಟಿಸುವರು. ಎಬಿವಿಪಿ ಮಾಜಿ ರಾಷ್ಟ್ರಾಧ್ಯಕ್ಷ, ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅಧ್ಯಕ್ಷತೆ ವಹಿಸುವರು. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ್ ಚೌಹಾಣ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿರುವರು.

ಅಂದು ಮಧ್ಯಾಹ್ನ 3.30ಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರದರ್ಶಿನಿ ಉದ್ಘಾಟಿಸುವರು. ರಾತ್ರಿ 9ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.

ಈ ಸಮಾವೇಶದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿ-ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಂಡು, ಶೈಕ್ಷಣಿಕ-ಸಾಮಾಜಿಕ ಸಮಸ್ಯೆ, ಸವಾಲುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯಲಿದೆ ಎಂದು ನಾಯಕ್ ತಿಳಿಸಿದರು.

ಎರಡು ವಿಶೇಷ ಭಾಷಣಗಳು : ಎರಡು ವಿಶೇಷ ಭಾಷಣಗಳು ನಡೆಯಲಿದ್ದು ಫೆ.8ರಂದು ಶನಿವಾರ ಬೆಳಗ್ಗೆ 11 ಕ್ಕೆ ವರ್ತಮಾನ ಭಾರತ ಎಂಬ ವಿಷಯದ ಬಗ್ಗೆ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್, ಫೆ.9ರಂದು ಭಾನುವಾರ ಬೆಳಗ್ಗೆ 9ಕ್ಕೆ ನಮ್ಮ ಕಾರ್ಯಪದ್ಧತಿ -ಸ್ವರೂಪ ಮತ್ತು ಔಚಿತ್ಯ ಎಂಬ ವಿಷಯದ ಬಗ್ಗೆ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಘುನಂದನ್ ಮಾತನಾಡಲಿದ್ದಾರೆ.

ಫೆ.9ರಂದು ಬೆಳಗ್ಗೆ 11ಕ್ಕೆ ಶಿಕ್ಷಣ, ರಾಷ್ಟ್ರ ಮತ್ತು ಸಂಸ್ಕೃತಿ-ಒಂದು ಅವಲೋಕನ ನಡೆಯಲಿದ್ದು ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷರಾದ ಚ.ನ ಶಂಕರರಾವ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತ ಕುಮಾರ್, ಎಬಿವಿಪಿ ರಾಜ್ಯ ಉಪಾಧ್ಯಕ್ಷ, ಡಾ.ರೋಹಿಣಾಕ್ಷ ಶಿರ್ಲಾಲು ಪಾಲ್ಗೊಳ್ಳುವರು.

ಫೆ.8ರಂದು ಸಾರ್ವಜನಿಕ ಸಭೆ:

ಫೆ.8 ರಂದು ಶನಿವಾರ ಸಾಯಂಕಾಲ ೫ಕ್ಕೆ ಆಯಾ ಪ್ರದೇಶಗಳ ಸಾಂಸ್ಕೃತಿಕ ವಿಶಿಷ್ಟತೆ – ಭವ್ಯತೆ ಸಾರುವ ಶೋಭಾಯಾತ್ರೆ ಹಾಗೂ ನಾಗರಿಕ ಸಮಾಜದ ಅರಿವಿನ ಜಾಗೃತಿಗಾಗಿ ಸಾರ್ವಜನಿಕ ಸಭೆ ನಡೆಯಲಿದೆ. ಸಾಯಂಕಾಲ ಕಾರ್‌ಸ್ಟ್ರೀಟ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯದ ವಿದ್ಯಾರ್ಥಿ ನಾಯಕರು ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೆ.ಸಿ.ನಾಯಕ್ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಸಿ.ಎ ಶಾಂತಾರಾಮ ಶೆಟ್ಟಿ, ನಗರ ಕಾರ್ಯದರ್ಶಿ ಮಣಿಕಂಠ ಕಳಸ, ನಗರಾಧ್ಯಕ್ಷೆ ಶ್ರೀಮತಿ ಭಾರತಿ ಸಂಜಯ್ ಪ್ರಭು ಉಪಸ್ಥಿತರಿದ್ದರು.

Comments are closed.