ಕರಾವಳಿ

ಭ್ರಾಮರಿ ಅವತಾರಿಣಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿಗೆ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ; ವೈಭವದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Pinterest LinkedIn Tumblr

ಮಂಗಳೂರು, ಜನವರಿ.31 : ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಮಹಾಮಾತೆ, ಜಗವನ್ನೇ ಪೊರೆಯುವ ಮಹಾಮಾತೆ, ಶಿಷ್ಟರ ರಕ್ಷಕಿ- ದುಷ್ಟ ಸಂಹಾರಿ, ಬೇಡಿದ ಭಕ್ತರ ಮನದಾಸೆ ಪೂರೈ ಸುವ ಕಾರುಣ್ಯನಿಧಿ; ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು.

ಸಾವಿರ ಸೀಮೆಯ ಆದಿ ಮಾಯೆಗೆ ನಡೆದ ಬ್ರಹ್ಮಕಲಶದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಸೇರಿದ ಭ್ರಮರಾಂಬಿಕೆಯ ಭಕ್ತ ಸಮೂಹ ಭಕ್ತಿಭಾವದಿಂದ ಪುನೀತರಾದರು. ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮೂಲಕ ಕಣ್ತುಂಬಿಕೊಂಡರು.

ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವ, ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ ವಿಧಿವಿಧಾನಗಳು ನೆರವೇರಿದವು. ಬ್ರಹ್ಮಕಲಶೋತ್ಸವದ ಬಳಿಕ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಶ್ರೀ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟ ರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಅವರ ನೇತೃತ್ವದಲ್ಲಿ ಬ್ರಹ್ಮಕಲಶದ ವಿಧಿವಿಧಾನಗಳು ನೆರವೇರಿದವು. ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಆಡಳಿತ ಸಮಿತಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು ಸೇರಿದಂತೆ ಹಲವು ಗಣ್ಯರು, ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಮುಂಜಾನೆ ಶ್ರೀ ಕ್ಷೇತ್ರದಲ್ಲಿ ಮೀನಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಿತು. ಬಳಿಕ ಅವಸ್ರುತ ಬಲಿ, ಮಹಾ ಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಭ್ರಾಮರಿ ವನದಲ್ಲಿ ಬೆಳಗ್ಗೆ ಶನಿಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾವೃಕ್ಷಗಳ ಸ್ಥಾಪನೆ ನೆರವೇರಿತು. ಸಂಜೆ ರಥಕಲಶಾಭಿಷೇಕ, ಮಹಾ ರಥೋತ್ಸವ, ಭೂತ ಬಲಿ, ಶಯನ, ಕವಾಟಬಂಧನ ನೆರವೇರಿತು. ಭ್ರಾಮರಿ ವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ ನೆರವೇರಿದವು.

ಕಳೆದ ಎಂಟು ದಿನಗಳಿಂದ ವಿವಿಧ ವಿಶೇಷ ಪೂಜಾದಿ ಸೇವಾ ಕಾರ್ಯಗಳೊಂದಿಗೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಗುರುವಾರ ನಡೆದ ಬ್ರಹ್ಮಕಲಶೋತ್ಸವಕ್ಕೆ ಕರಾವಳಿ ಹಾಗೂ ರಾಜ್ಯ-ಹೊರ ರಾಜ್ಯದ ಸಾವಿರಾರು ಜನರು ಸಾಕ್ಷಿಯಾದರು. ಮುಂಜಾನೆಯಿಂದ ರಾತ್ರಿಯವರೆಗೆ ಕಟೀಲಿನ ಯಾವ ಭಾಗದಲ್ಲಿ ನೋಡಿದರೂ ಜನಜಾತ್ರೆಯೇ ಕಂಡುಬಂತು.

ತಾಯಿ ಭ್ರಾಮರಿಯ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಳ್ಳುವ ಮಹದಾಸೆಯಿಂದ ಕ್ಷೇತ್ರ ದರ್ಶನ ಮಾಡಿದರು. ಒಂದೆಡೆ ವೈದಿಕ ಹಾಗೂ ಧಾರ್ಮಿಕ ವಿಧಾನಗಳ ಮುಖೇನ ತಾಯಿಯ ಬ್ರಹ್ಮಕಲಶದ ಸಡಗರ ನೆರವೇರಿದರೆ, ಇನ್ನೊಂದೆಡೆ ಸಹಸ್ರ ಸಂಖ್ಯೆಯ ಭಕ್ತರಿಗೆ ಅನ್ನದಾನದ ಮಹಾಸೇವೆ, ಮತ್ತೂಂದೆಡೆ ಸಾಂಸ್ಕೃತಿಕ ರಸದೌತಣ, ಮಗದೊಂದು ಕಡೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರಗಿದವು.

ಪ್ರಧಾನ ಸ್ವರ್ಣಕಲಶ ಸಹಿತ 1,001 ಕಲಶಗಳ ಮೂಲಕ ಬ್ರಹ್ಮಕಲಶ:

ಪ್ರಧಾನ ಸ್ವರ್ಣಕಲಶ ಸಹಿತ 1,001 ಬೆಳ್ಳಿಯ ಕಲಶಗಳಿಂದ ಕಟೀಲಿನ ಭ್ರಮರಾಂಬಿಕೆಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಕಲಶ ಮಂಡಲ ಪೂಜೆಯ ವೇಳೆ ಪ್ರಧಾನ ಸ್ವರ್ಣ ಕಲಶವನ್ನು ಮಂಡಲದ ಮಧ್ಯೆ ಪ್ರತಿಷ್ಠಾಪಿಸ ಲಾಯಿತು. 24 ದೊಡ್ಡ ಗಾತ್ರದ ಬೆಳ್ಳಿಯ ಖಂಡ ಕಲಶಗಳು ಮತ್ತು 976 ಬೆಳ್ಳಿಯ ಸಣ್ಣ ಕಲಶಗಳನ್ನು ಮಂಡಲದಲ್ಲಿ ಇರಿಸಿ ಪೂಜಿಸಿ ಬಳಿಕ ದೇವಿಗೆ ಅಭಿಷೇಕ ನಡೆಸಲಾಯಿತು.

ಬ್ರಹ್ಮಕಲಶ ಖಂಡದಲ್ಲಿ ಅಧಿವಾಸ ಮಾಡಲ್ಪಟ್ಟ ಬ್ರಹ್ಮಕಲಶ ಸೇರಿದಂತೆ ಒಟ್ಟು 1,001 ಕಲಶಗಳನ್ನು ಅಭಿಷೇಕ ಮಾಡ ಲಾಯಿತು. ಧಾತುಗಳು, ಮೂಲಗಳು, ರತ್ನ ಗಳು, ಕಷಾಯ ಗಳು, ಪಂಚಾಮೃತ ದ್ರವ್ಯಗಳು, ಪಂಚಗವ್ಯ, ಫಲೋದಕ ಮುಂತಾದ 25 ದ್ರವ್ಯಗಳ ಸಹಿತ ಕಲಶಾಭಿಷೇಕವನ್ನು ಸಮರ್ಪಿಸಲಾಯಿತು.

ಶನಿವಾರ ನಾಗಮಂಡಲ – ರವಿವಾರ ಕೋಟಿ ಜಪ ಯಜ್ಞ

ಕಟೀಲಿನಲ್ಲಿ ಜ.31ರಂದು ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.1ರಂದು ಭ್ರಾಮರೀ ವನದಲ್ಲಿ ಸಂಜೆ 7ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ.  ಫೆ. 2ರಂದು ಭ್ರಾಮರಿ ವನದಲ್ಲಿ ಬೆಳಗ್ಗೆ ಕೋಟಿ ಜಪಯಜ್ಞ ಆರಂಭವಾಗಿ ಸಂಜೆ ಪರಿಸಮಾಪ್ತಿ ಯಾಗಲಿದೆ. ಫೆ.3ರಂದು ಭ್ರಾಮರಿ ವನದಲ್ಲಿ ಮುಂಜಾನೆ 7ರಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.

Comments are closed.