ಕರಾವಳಿ

ಪಂಪ್‌ವೆಲ್‌ ಮೇಲ್ಸೇತುವೆ ಲೋಕಾರ್ಪಣೆ : ಫ್ಲೈ ಓವರ್ ಮೇಲೆ ವಾಹನಗಳ ಓಡಾಟ ಆರಂಭ

Pinterest LinkedIn Tumblr

ಮಂಗಳೂರು, ಜನವರಿ.31: ಹಲವು ವರ್ಷಗಳಿಂದ ಸಾಕಷ್ಟು ಟೀಕೆ ಹಾಗೂ ಅಪಹಾಸ್ಯಕ್ಕೆ ಗುರಿಯಾಗಿದ್ದ ನಗರದ ಹೃದಯ ಭಾಗದಲ್ಲಿರುವ ಪಂಪ್‌ವೆಲ್‌ (ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ) ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರ ಲೋಕಾರ್ಪಣೆಗೊಂಡಿತ್ತು.

ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಮೇಲ್ಸೇತುವೆಯನ್ನು ಇಂದು ಬೆಳಗ್ಗೆ ಉದ್ಘಾಟಿಸಿದರು. ಈ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದ್ದ ಪಂಪ್ ವೆಲ್ ಫ್ಲೈ ಓವರ್ ಮೇಲೆ ಇಂದಿನಿಂದ ವಾಹನಗಳ ಓಡಾಟ ಆರಂಭಗೊಂಡಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ , ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಪ್ರತಾಪಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೇಲ್ಸೇತುವೆಯು ಒಟ್ಟು 600 ಮೀಟರ್‌ ಉದ್ದ ಹಾಗೂ 20 ಮೀಟರ್‌ ಅಗಲ ಇದೆ. ಮೊದಲ ಆರು ವರ್ಷದಲ್ಲಿ ಕುಂಟುತ್ತಾ ಸಾಗಿದ ಕಾಮಗಾರಿಗೆ ಕಳೆದ ಮೂರು ವರ್ಷಗಳ ಹಿಂದೆ ವೇಗ ದೊರೆಯಿತು. ಬಳಿಕ ಮತ್ತೆ ನಿಧಾನಗತಿಯಲ್ಲಿ ಸಾಗಿ ಈ ಬಾರಿಯ ಮಳೆಗಾಲದಲ್ಲಿ ಕಾಮಗಾರಿ ಆಮೆಗತಿಗೆ ತಿರುಗಿತು.

2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದರು ನವಯುಗ್‌ ಸಂಸ್ಥೆಯ ಮೇಲೆ ಒತ್ತಡ ತಂದರೂ ಇದು ಸಾಧ್ಯವಾಗಲಿಲ್ಲ. ಬಳಿಕ ಫೆಬ್ರವರಿ, ಮೇ ಸೇರಿದಂತೆ ಗಡುವುಗಳು ವಿಸ್ತರಣೆಗೊಂಡವು. ಡಿಸೆಂಬರ್‌ 31ರೊಳಗೆ ಕಾಮಗಾರಿ ಪೂರ್ಣಗೊಂಡು ಜನವರಿ ಮೊದಲ ವಾರ ಉದ್ಘಾಟನೆ ಎಂದು ಸಂಸದ ನಳಿನ್‌ ಕುಮಾರ್‌ ಕೊನೆಯ ಡೆಡ್‌ಲೈನ್‌ ನೀಡಿದ್ದರು. ಇದು ಕೂಡ ಸಾಧ್ಯವಾಗದಿದ್ದಾಗ ಆ ವೇಳೆ ಸಂಸದರು ಪಂಪ್‌ವೆಲ್‌ ಮೇಲ್ಸೇತುವೆಯ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದ್ದರು.

ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸಮಕ್ಷಮದಲ್ಲಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕಂಪೆನಿ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ಮಾಡಿತ್ತು. ಅದರಂತೆ ಇದೀಗ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಡಾಮರೀಕರಣದೊಂದಿಗೆ ಪೂರ್ಣಗೊಂಡಿದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿದೆ.

ಟ್ರೋಲ್‌ : “ಪಂಪ್‌ವೆಲ್‌ಗೆ ಬಲೆ’ ಹಾಡು – ಜಾಲ ತಾಣಗಳಲ್ಲಿ ವೈರಲ್

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿತ್ತು. ಫೇಸ್‌ಬುಕ್‌ನಲ್ಲಿ ಟ್ರೆಂಡ್‌ ಆಗಿರುವ 10 ವರ್ಷದ ಚಾಲೆಂಜ್‌ನಲ್ಲಿ ಪಂಪ್‌ವೆಲ್‌ ಮೇಲ್ಸೇತುವೆ ಚಿತ್ರ ಬಳಸಿ ಕಳೆದ ಹತ್ತು ವರ್ಷಗಳ ಹಿಂದೆ ಇದ್ದ ಪಂಪ್‌ವೆಲ್‌ ವೃತ್ತ ಮತ್ತು ಈಗಿನ ಮೇಲ್ಸೇತುವೆ ಕಾಮಗಾರಿ ಸ್ಥಿತಿಯನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಜೊತೆ “ಪಂಪ್‌ವೆಲ್‌ಗೆ ಬಲೆ’ ಎಂಬ ಹಾಡು ಕೂಡ ಪ್ರಸಿದ್ಧಿ ಪಡೆದಿತ್ತು. ಸಂಸದ ನಳಿನ್‌ ಅವರು ಮೇಲ್ಸೇತುವೆ ಉದ್ಘಾಟನೆ ಜನವರಿ ಮೊದಲ ವಾರ ಎಂದು ಈ ಹಿಂದೆ ಹೇಳಿದ್ದರು. ಇದೇ ಮಾತಿನ ತುಣುಕನ್ನು ಬೇರೆ ಬೇರೆ ರೀತಿಯಲ್ಲಿ ಟ್ರೋಲ್‌ ಆಗಿತ್ತು.

Comments are closed.