ಕರಾವಳಿ

ಕುಂದಾಪುರದಲ್ಲಿ ಆರ್.ಟಿ.ಓ ಕಛೇರಿ: ಸರಕಾರಕ್ಕೆ ಪತ್ರ ಬರೆದ ಸಚಿವ ಕೋಟ

Pinterest LinkedIn Tumblr

ಕುಂದಾಪುರ: ಜನರ ಬಹು ವರ್ಷಗಳ ಬೇಡಿಕೆಯಾಗಿದ್ದ ಕುಂದಾಪುರದಲ್ಲೇ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭವಾಗಬೇಕು ಎನ್ನುವ ಹೋರಾಟಕ್ಕೆ ಮತ್ತೆ ಜೀವ ಬಂದಿದೆ. ಮಣಿಪಾಲದ ಬಳಿಕ ಕುಂದಾಪುರದಲ್ಲಿಯೂ ಹೊಸದಾಗಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಪ್ರಸಕ್ತ ಸಾಲಿನಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಕುಂದಾಪುರ, ಬೈಂದೂರು, ಶಿರೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಶಂಕರನಾರಾಯಣ, ಹಾಲಾಡಿಯಂತಹ ಗ್ರಾಮಾಂತರ ಭಾಗದ ಜನರು ಚಾಲನಾ ಪರವಾನಿಗೆ, ವಾಹನ ನೋಂದಣಿ, ನವೀಕರಣ ಮತ್ತಿತರ ಕೆಲಸಕ್ಕಾಗಿ 60-70 ಕಿ.ಮೀ. ದೂರದ ಮಣಿಪಾಲಕ್ಕೆ ತೆರಳಬೇಕಾದ ಅನಿವಾರ್‍ಯತೆಯಿದೆ. ಈ ಕಾರಣಕ್ಕೆ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಆರಂಭಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

ಕುಂದಾಪುರದಲ್ಲಿ ಎಲ್ಲ ಅರ್ಹತೆಗಳಿದ್ದರೂ, ಹಲವು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದರೂ, ಇನ್ನೂ ಸಾರಿಗೆ ಕಚೇರಿ ಆರಂಭಿಸುವ ಕುರಿತಂತೆ ಈವರೆಗೆ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಈ ಬಗ್ಗೆ ಇಲ್ಲಿಗೆ ಭೇಟಿ ನೀಡಿದ ಎಲ್ಲ ಸಾರಿಗೆ ಸಚಿವರು, ಸಂಬಂದಪಟ್ಟ ಅಧಿಕಾರಿಗಳೆಲ್ಲರಿಗೂ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ.

ವಿ.ಎಸ್. ಆಚಾರ್ಯರಿಂದಲೂ ಪ್ರಸ್ತಾವ
ಕುಂದಾಪುರದಲ್ಲಿ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವುದಾಗಿ ಒತ್ತಾಯಿಸಿ, ಈ ಹಿಂದೆ ಸಚಿವರಾಗಿದ್ದ ದಿ| ವಿ.ಎಸ್. ಆಚಾರ್ಯ ಅವರು ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಕೋಟ ಬರೆದ ಪತ್ರದಲ್ಲೇನಿದೆ?
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಬೇಕು ಎನ್ನುವ ಕುರಿತಂತೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಕುಂದಾಪುರದಲ್ಲಿ 72 ಸಾವಿರಕ್ಕೂ ಅಧಿಕ ವಾಹನಗಳಿದ್ದು, ವಾರದಲ್ಲಿ ಒಂದು ದಿನದ ಕ್ಯಾಂಪ್ ನಡೆಸುವುದರಿಂದ ಸರಾಸರಿ 600 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ತಪ್ಪಿದಲ್ಲಿ ಅವರೆಲ್ಲ 60-70 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗಬೇಕು. ಆದ್ದರಿಂದ ಹೊಸದಾಗಿ ಪ್ರತ್ಯೇಕ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಿಸಬೇಕು ಎನ್ನುವುದು ಕುಂದಾಪುರದ ಜನತೆಯ ಬೇಡಿಕೆಯಾಗಿದ್ದು, ಕುಂದಾಪುರಕ್ಕೆ ಕಚೇರಿ ಮಂಜೂರು ಮಾಡಿ, ಈ ಸಾಲಿನಲ್ಲಿಯೇ ಪ್ರಾರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾನದಂಡಗಳೇನು?
* ಸಾರಿಗೆ ಕಚೇರಿ ಆರಂಭಿಸಬೇಕಾದರೆ ಪ್ರಸ್ತಾವಿತ ಜಾಗದಲ್ಲಿ ಈಗಾಗಲೇ ನೋಂದಣಿಯಾದ ಎಲ್ಲ ವಾಹನಗಳಿಂದ ವಾರ್ಷಿಕ ಕನಿಷ್ಠ  20 ಕೋ.ರೂ. ತೆರಿಗೆ (ರಾಜಸ್ವ) ಮೂಲಕ ಆದಾಯ ಬರಬೇಕು.
* ಪ್ರಸ್ತಾವಿತ ಕಚೇರಿ ಜಾಗದಲ್ಲಿ ಕನಿಷ್ಠ 30ಸಾವಿರ ವಾಹನಗಳ ನೋಂದಣಿಯಾಗಿರಬೇಕು.
* ಆ ಭಾಗದಲ್ಲಿ ಕನಿಷ್ಠ 10 ಸಾವಿರ ಚಾಲನಾ ಪರವಾನಗೆ ನೀಡಿರಬೇಕು.
* ವಾರ್ಷಿಕ 10 ಸಾವಿರ ಚಾಲನಾ ಪರವಾನಗೆ ನೋಂದಣಿಯಾಗಿರಬೇಕು.
* ಪ್ರಸ್ತಾವಿತ ಕಚೇರಿಯು ಮೂಲ ಕಚೇರಿಯಿಂದ ಗ್ರಾಮೀಣ ಭಾಗಗಳಿಂದ 50 ಕಿ.ಮೀ. ಅಂತರವಿರಬೇಕು.

ಅರ್ಹತೆ ಏನಿರಬೇಕು?
* ಕುಂದಾಪುರ ‘ಗಗಳಿಂದ ನೋಂದಣಿಯಾದ ವಾಹನಗಳಿಂದ ಪ್ರತಿ ವಷರ 20 ಕೋ.ರೂ.ಗಿಂತ ಅಽಕ ತೆರಿಗೆ (ರಾಜಸ್ವ) ಸಂಗ್ರಹವಾಗುತ್ತದೆ.
* ಇಲ್ಲಿ ಈವರೆಗೆ 60710 ವಾಹನ ನೋಂದಣಿಯಾಗಿ ಉಪಯೋಗದಲ್ಲಿದೆ.
* ಕುಂದಾಪುರ ಭಾಗದ 27529 ಮಂದಿಗೆ ಚಾಲನಾ ಪರವಾನಗೆ ನೀಡಲಾಗಿದೆ.
* ವಾರ್ಷಿಕ 58382 ವಾರ್ಷಿಕ ನೋಂದಣಿ ನೀಡಲಾಗುತ್ತದೆ.
* 50 ಕಿ.ಮೀ. ಅಂತರದಲ್ಲಿದೆ.

Comments are closed.