ಉಡುಪಿ: ಈ ನಾಡಿನ ಸಮಾಜ ಸುಧಾಕರುಗಳಾದ ಬಸವಣ್ಣ, ಕುವೆಂಪು, ಕನಕದಾಸ ರನ್ನು ಆರ್‌ಎಸ್‌ಎಸ್ ಎಂದಿಗೂ ಒಪ್ಪುದೇ ಇಲ್ಲ. ಹಿಂದುತ್ವದ ಬಗ್ಗೆ ಮಾತನಾಡುವ ಆರ್‌ಎಸ್‌ಎಸ್, ಸ್ಮಶಾನದಲ್ಲಿ ಜಾಗ ಸಿಗದ ದಲಿತರ ಬಗ್ಗೆ ಮೌನ ವಹಿಸುತ್ತದೆ. ಇವರ ಹಿಂದುತ್ವ ಎಂಬುದು ಕೇವಲ ಮುಸ್ಲಿಮರನ್ನು ದ್ವೇಷ ಮಾಡುವುದು ಮಾತ್ರ ಆಗಿದೆ. ದಲಿತರು, ಶೂದ್ರರ ನಿಜವಾದ ಶತ್ರುಗಳು ಬ್ರಾಹ್ಮಣ್ಯವೇ ಹೊರತು ಮುಸ್ಲಿಮರಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಹೇಳಿದ್ದಾರೆ.
ಸಹಬಾಳ್ವೆ ಉಡುಪಿ ವತಿಯಿಂದ ಸಮಾನ ಮನಸ್ಕರ ಸಹಯೋಗದೊಂದಿಗೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆ ವಿರುದ್ಧ ಗುರುವಾರ ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ವಿವೇಕಾನಂದರ ಹಿಂದುತ್ವದ ಫಾಲೋ ಮಾಡುವವರು ಆರ್‌ಎಸ್‌ಎಸ್‌ನಲ್ಲಿ ಇರಲು ಸಾಧ್ಯವೇ ಇಲ್ಲ. ಅದನ್ನು ದಿಕ್ಕರಿಸಿ ಹೊರಗಡೆ ಬರುತ್ತಾರೆ. ಇವರು ಭವಿಷ್ಯದಲ್ಲಿ ಹಿಂದು ಸಮಾಜವನ್ನು ಅಪಾಯದ ಕಡೆ ಕರೆದುಕೊಂಡು ಹೋಗು ತ್ತಿದ್ದಾರೆ. ಹಿಂದುತ್ವ ಹೆಸರಿನಲ್ಲಿ ಭಯೋತ್ಪಾದನೆ ಮಾಡಲಾಗುತ್ತಿದೆ. ದೇಶದಲ್ಲಿ ಆರ್‌ಎಸ್‌ಎಸ್ ಪ್ರೇರಿತವಾಗಿ ಭಯ ಸೃಷ್ಠಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಕೇಂದ್ರ ಸರಕಾರ ಸಂವಿಧಾನ ವಿರೋಧಿಯಾಗಿ ನಡೇದುಕೊಳ್ಳುತ್ತಿದೆ. ಸಿಎಎ ಮೂಲಕ ನಿರ್ದಿಷ್ಟ ಒಂದು ಸಮುದಾಯವನ್ನು ಗುರಿಯಿರಿಸಿ ದಮನಕಾರಿ ನೀತಿ ಅನುಸರಿಸುತ್ತಿದೆ. ಈ ಬಗ್ಗೆ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಸಾಮಾಜಿಕ ಹೋರಾಟಗಾರ ಕವಿತಾ ರೆಡ್ಡಿ ಮಾತನಾಡಿ, ಸಿಎಎ ತಿದ್ದುಪಡಿ ತರುವ ಅಗತ್ಯವೇ ಇರಲಿಲ್ಲ. ಈ ದೇಶವನ್ನು ಬಂಗಾರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಇವರು, ಇಡೀ ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ಬಿಜೆಪಿ ಜಾರಿಗೆ ತಂದ ಕಾಯಿದೆಗಳಿಂದ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ತೊಂದರೆ ಆಗುತ್ತಿದೆ. ಈ ಮೂಲಕ ಮನುವಾದಿ ಮನಸ್ಥಿತಿಗಳು ದೇಶದ ಸಂವಿಧಾನವನ್ನು ಮುಗಿಸಲು ಹೊರಟಿವೆ. ಆ ಮನಸ್ಥಿತಿಯನ್ನು ಉಳಿಯಲು ನಾವು ಬಿಡುವುದಿಲ್ಲ ಎಂದರು.
ನಜ್ಮಾ ನಜೀರ್ ಮಾತನಾಡಿ, ಕೇಂದ್ರ ಸರಕಾರ ಪೌರತ್ವ ಕಾಯಿದೆ ತಿದ್ದುಪಡಿ ಯನ್ನು ಜಾರಿಗೆ ತಂದಿರುವುದು ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ ದಲ್ಲಿನ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರ ಮೇಲಿನ ಕಾಳಜಿ ಯಿಂದ ಅಲ್ಲ. ಬದಲಾಗಿ ಅವರಿಗೆ ಚುನಾವಣಾ ರಾಜಕೀಯ ಮಾಡಲು ಹಾಗೂ ಓಟು ಬ್ಯಾಂಕಿಗಾಗಿ ಈ ಕಾಯಿದೆಗಳ ಮೂಲಕ ಹುನ್ನಾರ ನಡೆಸುತ್ತಿ ದ್ದಾರೆ. ಈ ಕಾಯಿದೆ ಮೂಲಕ ಸಂವಿಧಾನದ ಆಧಾರ ಸ್ತಂಭಗಳನ್ನೇ ಇವರು ಉರುಳಿಸುತ್ತಿದ್ದಾರೆ ಹಾಗೂ ದೇಶದ ಸೌಹಾರ್ದತೆಯ ಪರಂಪರೆಯನ್ನು ಒಡೆ ಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಅಮೂಲ್ಯ ಮಾತನಾಡಿ, ಅಮಿತ್ ಶಾ, ಮೋದಿ ಸಬ್ ಕಾ ಸಾಥ್, ಸಬ್ ಕಾ ವಿನಾಶ್ ಮಾಡಲು ಹೊರಟಿದ್ದಾರೆ. ದೇಶದ ಪ್ರಜೆಗಳಿಗೆ ಮಾದರಿಯಾಗ ಬೇಕಾದ ಪ್ರಧಾನ ಮಂತ್ರಿಯೇ ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ನಾವು ಮಾಡುತ್ತಿರುವ ಹೋರಾಟ ಯಾರ ವಿರುದ್ಧವೂ ಅಲ್ಲ. ಇದು ಹಿಂದುತ್ವದ ಹೆಸರಿನಲ್ಲಿ ನಡೆಸಲಾಗುವ ಜಾತಿವಾದದ ವಿರುದ್ಧ ಹೋರಾಟ ಆಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಝೀರ್ ಅಹ್ಮದ್, ಹಿರಿಯ ಚಿಂತಕ ಜಿ.ರಾಜ ಶೇಖರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಾಮಾಜಿಕ ಹೋರಾಟ ಗಾರ ಮೆಹರೋಜ್ ಖಾನ್, ಭವ್ಯಾ ನರಸಿಂಹಮೂರ್ತಿ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಾಜಿ ಅಬ್ದುಲ್ಲಾ ಪರ್ಕಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಸ್ಸಯ್ಯಿದ್ ಜಅಫರ್ ತಂಙಳ್ ಕೋಟೇಶ್ವರ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಜೆಡಿಎಸ್ ಜಿಲ್ಲಾಯೋಗೀಶ್ ಶೆಟ್ಟಿ, ಸಹಬಾಳ್ವೆ ಸಂಚಾಲಕರಾದ ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ, ಪಿಎಫ್‌ಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ರೋಶಿನಿ ಒಲಿವೇರಾ, ಆಲ್ವಿನ್ ಕ್ವಾಡ್ರರ್ಸ್, ಶಬ್ಬೀರ್ ಮಲ್ಪೆ, ಶೇಖ್ ಇಕ್ರ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ವಂದಿಸಿದರು. ಪತ್ರಕರ್ತ ಶಶಿಧರ್ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿದರು.
Comments are closed.