ಕರಾವಳಿ

ಕಬ್ಬಿಗೆ ಬೆಂಕಿ ಹಾಕಲು ಹೊರಟವರು ಈಗ ಆಲೆಮನೆಯಲ್ಲಿ ಶುದ್ದ ‘ಬೆಲ್ಲ’ ಮಾಡ್ತಾರೆ!

Pinterest LinkedIn Tumblr

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭದ ಕನಸು ಹೊತ್ತು ಕಬ್ಬು ಬೆಳೆದ ರೈತರಿವರು. ಆದರೆ ಕಾರ್ಖಾನೆ ಪುನಶ್ಚೇತನ ಮಾತ್ರ ಮರೀಚಿಕೆಯಾಗಿರುವ ಬೆನ್ನಲ್ಲೇ ಬೆಳೆದ ಕಬ್ಬು ಏನು ಮಾಡಬೇಕೆಂದು ತೋಚಲಿಲ್ಲ. ಆಗ ಕಂಡಿದ್ದೇ ಆಲೆಮನೆ ಮಾಡಿ ಅದರಲ್ಲಿ ಶುದ್ಧ ಬೆಲ್ಲ ತಯಾರಿಸುವ ದಾರಿ.

ಕುಂದಾಪುರ ತಾಲೂಕು ಕೆದೂರು ಗ್ರಾಮದ ಶಾನಾಡಿ ಹಿರಿಯ ಕೃಷಿಕರಾದ ಉಮಾನಾಥ ಶೆಟ್ಟಿ ಹಾಗೂ ರಾಮಚಂದ್ರ ಭಟ್ ಎಂಬಿಬ್ಬರು ರೈತರು ಕಬ್ಬಿನ ತೋಟದ ಬಳಿಯೇ ಆಲೆಮನೆ ಮಾಡಿ, ಕಬ್ಬರೆದು, ಬೆಲ್ಲ ಮಾಡಿ ಶುದ್ಧ ಬೆಲ್ಲ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಕಬ್ಬು ಬೆಳೆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕುಮಾರ ಸ್ವಾಮಿ ನೀಡಿದ್ದ ನಂಬಿ ಕಬ್ಬು ಕೃಷಿಗೆ ಮುಂದಾದರು. ಒಂದು ಕಡೆ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ, ಮತ್ತೊಂದು ಕಡೆ ಕೋಟಿ ಕೋಟಿ ಅನುದಾನದ ವಾರಾಹಿ ನೀರಿನ ಸದ್ಬಳಕೆ ಆಗಬೇಕು ಎನ್ನೋದು ಕಬ್ಬು ಕೃಷಿಯ ಮೂಲ ಉದ್ದೇಶ.

2018ರಲ್ಲಿ ಶಾನಾಡಿ ಬಯಲಲ್ಲಿ 8 ಎಕ್ರೆ ಜಾದಲ್ಲಿ ಕಬ್ಬು ಬೆಳೆಯಲಾಯಿತು. 2019ರಲ್ಲಿ ಒಟ್ಟು 16 ಎಕ್ರೆ ಜಾಗದಲ್ಲಿ ಕಬ್ಬು ಬೆಳೆಯಲಾಗಿದೆ. ಕಬ್ಬು ಬೆಳೆದರೂ ಸಕ್ಕರೆ ಕಾರ್ಖಾನೆ ಆರಂಭವಾಗದ ಹಿನ್ನೆಲೆಯಲ್ಲಿ ಬ್ರಹ್ಮಾವರ ಶ್ರೀದೇವಿ ಗ್ಯಾರೆಜ್ ಮಾಲೀಕ ಶೀನ ಪೂಜಾರಿ ಶ್ರವಣಬೆಳಗೊಳದಿಂದ ತಂದು ಗಾಣ ತಂದು ಫಿಟ್ ಮಾಡಿ ಪ್ರೋತ್ಸಾಹಿಸಿದ್ದರಿಂದ ಆಲೆಮನೆ ತಲೆಯೆತ್ತಿದೆ. ಒಟ್ಟಾರೆ ಕಬ್ಬು ಬೆಳೆದರೂ ಕಾರ್ಖಾನೆ ಆರಂಭಗದೆ, ಗದ್ದೆಯಲ್ಲಿ ಕಬ್ಬು ಹಾಳಾಗಿ ಹೋಗುವದ ತಪ್ಪಿಸುವ ಉದ್ದೇಶದಲ್ಲಿ ಅಲೆಮನೆ ಮೂಲಕ ಕಬ್ಬರೆದು ಬೆಲ್ಲ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಕೃಷಿಕರು ಮಾದರಿಯಾಗಿದ್ದಾರೆ.

ವಾರಾಹಿ ಸದ್ವಿನಿಯೋಗ..!
ವಾರಾಹಿ ನೀರು ಬಳಸಿಕೊಂಡು ಕಬ್ಬು ಬೆಳೆದ ಪ್ರಥಮ ಕೃಷಿಕರ ಪಟ್ಟಿಯಲ್ಲಿ ಇವರಿಬ್ಬರು ಹಿರಿಯ ಕೃಷಿಕರಿದ್ದಾರೆ. ವರ್ಷವಿಡೀ ಹರಿಯುವ ವಾರಾಹಿ ನೀರನ್ನು ಬಳಸಿಕೊಂಡು ಈ ಕಬ್ಬನ್ನು ಬೆಳೆಯಲಾಗಿದೆ. ಕಬ್ಬು ಬೆಳೆಯಲು ವಾರಾಹಿ ಸಹಕಾರಿಯಾಗಿದ್ದಕ್ಕೋ ಏನೋ ಗೊತ್ತಿಲ್ಲ. ಇವರ ಆಲೆಮನೆಗೂ ಶ್ರೀ ವಾರಾಹಿ ಎಂದು ನಾಮಕರಣ ಮಾಡಿದ್ದಾರೆ.

ಆಲೆಮನೆಗೆ ನಿತ್ಯ ನೂರಾರು ಜನರು…
ತೆಕ್ಕಟ್ಟೆ ಮಾರ್ಗವಾಗಿ ಕೆದೂರು ರೈಲ್ವೇ ಬ್ರಿಡ್ಜ್ ಭಾಗದಿಂದ ಬಲಕ್ಕೆ ತೆರಳಿದರೆ ಅಲ್ಲಲ್ಲಿ ಆಲೆಮನೆಗೆ ತೆರಳುವ ದಾರಿ ಎಂದು ಫಲಕಗಳನ್ನು ಅಳವಡಿಸಲಾಗಿದೆ. ಹಾಗೆಯೇ ಸಾಗಿದರೆ ಎಕ್ರೆಗಟ್ಟಲೇ ಬಯಲು ಪ್ರದೇಶ ಸಿಗುತ್ತೆ. ಅಲ್ಲಿಯೇ ಈ ಪುಟ್ಟ ಆಲೆಮನೆ ಕಾಣಸಿಗುತ್ತೆ. ಕೃಷಿಕರ ಆಲೆಮನೆ ಜನಾಕರ್ಷಣೆ ಕೇಂದ್ರವಾಗಿದ್ದೂ ಪ್ರತಿದಿನ ನೂರಾರು ಜನ ಬರುತ್ತಿದ್ದಾರೆ. ಆಲೆಮನೆ ವೀಕ್ಷಿಸಿ ಬೆಲ್ಲ ತಯಾರಿಸುವ ವ್ಯವಸ್ಥೆ ಕಂಡು ಖುಷ್ಗಿ ಪಡುವುದು ಮಾತ್ರವಲ್ಲದೇ ತಾವು ಕಬ್ಬು ಬೆಳೆಯುವ ಸಂಕಲ್ಪ ಮಾಡುತ್ತಿದ್ದಾರೆ. ಇನ್ನು ಆಲೆಮನೆಗೆ ಬರುವ ಜನರಿಗೆ ಶುಚಿ ರುಚಿಯಾದ ಸಿಹಿಸಿಹಿ ಕಬ್ಬಿನಾಲು ನೀಡಿ ಸ್ವಾಗತಿಸಲಾಗುತ್ತೆ.

ಕಬ್ಬು ಕೃಷಿ ಅಭಿವೃದ್ಧಿ, ವಾರಾಹಿ ನೀರು ಪೋಲಾಗದೆ ಸದ್ವಿನಿಯೋಗ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭದ ಕನಸು ಕಬ್ಬು ಕೃಷಿಗೆ ಪ್ರೇರಣೆ. ಹತ್ತು ಎಕ್ರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅರ್ಧ ಬೀಜ ನಾಟಿ, ಹಾಗೂ ಇನ್ನರ್ಧ ಕೊಳೆ ಕಬ್ಬು ಕೃಷಿ ಮಾಡಿದ್ದೇವೆ. ಸಸಿ ನಾಟಿ ಮಾಡಿದ್ದರಿಂದ ಒಂದೂವರೆ ತಿಂಗಳು ಬೆಳೆ ಬೇಗ ಸಿಗುತ್ತಿದೆ. ಶಾನಾಡಿ ಬಯಲಲ್ಲಿ ಒಟ್ಟು 16ಎಕ್ರೆ ಕಬ್ಬು ಬೆಳೆಯಿದೆ. ಸಕ್ಕರೆ ಕಾರ್ಖಾನೆ ಚಾಲೂ ಆಗದ ನಿಮಿತ್ತ ಆಲೆಮನೆ ಆರಂಭಿಸಿದ್ದು, ರಾಸಾಯನಿಕ ಮುಕ್ತ ಶುದ್ಧ ಬೆಲ್ಲ ಗ್ರಾಹಕರಿಗೆ ನೀಡುತ್ತಿದ್ದೇವೆ. ಪ್ರತಿದಿನ ನೂರಾರು ಜನ ವೀಕ್ಷಣೆಗೆ ಬರುತ್ತಿದ್ದು, ಅವರೂ ಕಬ್ಬು ಕೃಷಿ ಮಾಡಲು ಉತ್ಸುಕರಾಗಿದ್ದಾರೆ. 2018ರಲ್ಲಿ 8 ಎಕ್ರೆ ಕಬ್ಬು ಬೆಳೆದಿದ್ದು,2019ರಲ್ಲಿ 12 ಎಕ್ರೆ ಕಬ್ಬು ಕೃಷಿ ಮಾಡಿದ್ದೇನೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭವಾಗಲೇ ಬೇಕು ಅದು ನಮ್ಮ ಹಕ್ಕಾಗಿದ್ದು, 350 ಕೋಟಿ ಆಸ್ತಿ ಅದು ರೈತರದ್ದು. ಕಬ್ಬು ಬೆಳೆದು ಇಥಿನಾಲ್ ಉತ್ಪಾದಿಸುವ ಮೂಲಕ ರೈತರು ಪ್ರಯೋಜನ ಪಡೆಯುವ ಜೊತೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದೇವೆ ಎಂಬ ತೃಪ್ತಿ ಸಿಗುತ್ತದೆ.
-ಉಮಾನಾಥ ಶೆಟ್ಟಿ, ಕಬ್ಬು ಕೃಷಿಕ,ಶಾನಾಡಿ, ಕೆದೂರು.

ವಾರಾಹಿ ಯೋಜನೆ ನೀರು ಧರ್ಮಕ್ಕೆ ಹರಿದು ಹೋಗಬಾರದು. ಹಾಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎನ್ನುವ ನಿಟ್ಟಿನಲ್ಲಿ ಕಬ್ಬು ಬೆಳೆದು, ಆಲೆಮನೆ ಮಾಡಿ, ನಾವೇ ನೇರವಾಗಿ ಗ್ರಾಹಕರಿಗೆ ಶುದ್ಧ ಬೆಲ್ಲ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮದು ಸಂಪೂರ್ಣ ಸಾವಯವ ಕೃಷಿಯಾಗಿದ್ದು, ಕಬ್ಬು, ಅಡಕೆ, ತೆಂಗು, ಗೇರು, ಮಾವು ಸೇರಿ ಭೂಮಿಯಲ್ಲಿ ಏನೆಲ್ಲಾ ಬೆಳೆ ಬೆಳೆಯಲಾಗುತ್ತದೋ ಅದೆಲ್ಲವೂ ನಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದೇನೆ. ಕೃಷಿ ನಷ್ಟ ಎನ್ನುವುದು ಒಪ್ಪದ ಮಾತು. ಭೂಮಿಯಲ್ಲಿ ದುಡಿದರೆ ಫಲ ಸಿಕ್ಕೇ ಸಿಗುತ್ತದೆ.
-ರಾಮಚಂದ್ರ ಭಟ್, ಕಬ್ಬು ಹಾಗೂ ಸಾವಯವ ಕೃಷಿಕ ಶಾನಾಡಿ

(ಯೋಗೀಶ್ ಕುಂಭಾಸಿ)

Comments are closed.