ಕರಾವಳಿ

ಜಿಲ್ಲೆಯ ಸೌಹಾರ್ದತೆ ಪರಂಪರೆ ಎತ್ತಿಹಿಡಿಯಿರಿ : ಗೃಹ ಸಚಿವ ಬಸವರಾಜ ಬೊಮ್ಮಾಯಿ ಕರೆ

Pinterest LinkedIn Tumblr

ಮಂಗಳೂರು ಡಿಸೆಂಬರ್ 31 : ದಕ್ಷಿಣ ಕನ್ನಡ ಜಿಲ್ಲೆಯನ್ನು ಹಲವಾರು ಹಿರಿಯರು ಕಟ್ಟಿ ಬೆಳೆಸಿ ಇಲ್ಲಿನ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದು, ಈ ಪರಂಪರೆಯನ್ನು ಎತ್ತಿಹಿಡಿದು ಜನತೆ ಶಾಂತಿ ನೆಮ್ಮದಿಯನ್ನು ಮುಂದುವರಿಸಲು ಸಹಕರಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ದ.ಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆಯೋಜಿಸಿದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ಸೌಹಾರ್ದತೆ ಸೌಜನ್ಯದಿಂದ ಬದುಕು ರೂಪಿಸಿಕೊಳ್ಳಬೇಕು. ಗಲಭೆ ಗಲಾಟೆಗಳನ್ನು ಬದಿಗೊತ್ತಿ, ಸಂಬಂಧಗಳನ್ನು ಕೆಣಕದೆ, ಸಂಬಂಧಗಳಿಗೆ ಕೆಡುಕು ಉಂಟು ಮಾಡದೆ ಪ್ರಜಾಪ್ರಭುತ್ವವನ್ನು ಗೌರವಿಸಿ ಮುಂದಿನ ದಿನಗಳಲ್ಲಿ ದಾರ್ಮಿಕವಾಗಿ ನಡೆಯುವ ಯಾವುದೇ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡದೆ ಅಂತಹ ಕಾರ್ಯಗಳನ್ನು ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ದೇಶಾದಾತ್ಯಂತ ಪೌರತ್ವ ಕಾಯ್ದೆ ಪ್ರತಿಭಟನಾ ಸಭೆಗಳು ನಡೆಯುತ್ತಿದೆ, ಮಂಗಳೂರಿನಲ್ಲಿ ಈಗಷ್ಟೇ ಗಲಭೆಗಳು ಶಾಂತಿಯೆಡೆಗೆ ತಲೆಮಾಡಿದ್ದು, ಈ ಘಟನೆ ಪೂರ್ತಿಯಾಗಿ ಕಡಿಮೆಯಾಗಿ, ತಿಳಿ ವಾತಾವರಣ ಆವರಿಸಿದ ನಂತರ ಬೃಹತ್ ಸಮ್ಮೇಳನಗಳನ್ನು ನಡೆಸಲು ಸೂಕ್ತ ಎಂದು ಅವರು ಸಲಹೆ ನೀಡಿದರು.

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಂತಿ ನೆಮ್ಮದಿಯಿಂದ ಸಮಾವೇಶ ನಡೆಸಬೇಕು, ಶಾಂತಿ, ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಉಳಿಸಿ, ಉತ್ತಮ ಸಲಹೆಗಳನ್ನು ಸಮಾಜಕ್ಕೆ ನೀಡುವ ಕಾರ್ಯ ಬೃಹತ್ ಸಮಾವೇಶದಲ್ಲಿ ನಡೆಯಬೇಕು. ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಸಂಜೀವ ಮಠಂದೂರು, ಎಸ್. ಅಂಗಾರ, ಐವನ್ ಡಿಸೋಜಾ, ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಕಮೀಷನರ್ ಡಾ. ಪಿ.ಎಸ್. ಹರ್ಷ, ಅಪರ ಜಿಲ್ಲಾಧಿಕಾರಿ ರೂಪಾ, ಎಸ್‍ಪಿ ಲಕ್ಷ್ಮೀಪ್ರಸಾದ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್, ಯೆನಪೋಯ ಅಬ್ದುಲ್ಲಾ ಕುಂಞ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಗದೀಶ್ ಶೇಣವ, ಮುಮ್ತಾಝ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Comments are closed.