ಮುಂಬೈ

ಉದ್ಧವ್‌ ಠಾಕ್ರೆ ಸಂಪುಟದಲ್ಲಿ ಭಿನ್ನಮತ ಸ್ಫೋಟ!

Pinterest LinkedIn Tumblr


ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ‘ಮಹಾ ಅಘಾಡಿ’ ಸರಕಾರದಲ್ಲಿ ಸಂಪುಟ ವಿಸ್ತರಣೆಯ ಮರುದಿನವೇ ಭಿನ್ನಮತ ಸ್ಫೋಟಗೊಂಡಿದೆ. ಸಂಪುಟದಲ್ಲಿ ಸ್ಥಾನ ವಂಚಿತರಾದ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್‌ ಸಚಿವಾಕಾಂಕ್ಷಿಗಳ ಅತೃಪ್ತಿ ಮತ್ತಷ್ಟು ಜೋರಾಗಿದ್ದು, ಮಾಜಿ ಸಿಎಂ ಪೃಥ್ವಿರಾಜ್‌ ಚವಾಣ್‌ ಸೇರಿದಂತೆ ಹಲವು ಹಿರಿಯ ಮುಖಂಡರು ದಿಲ್ಲಿಯಲ್ಲಿ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಭೇಟಿ ಮಾಡಿ, ತಮ್ಮ ಅಳಲು ತೋಡಿಕೊಂಡಿದ್ದಾರೆ.

”ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ಸಿನ ನಿಷ್ಠಾವಂತ ಹಿರಿಯ ಮುಖಂಡರನ್ನು ಕಡೆಗಣಿಸಲಾಗಿದೆ,” ಎಂದು ಮಾಜಿ ಸಿಎಂ ಪ್ರಥ್ವಿರಾಜ್‌ ಚವಾಣ್‌ ಆರೋಪಿಸಿದ್ದಾರೆ. ಸೋನಿಯಾ ಅವರನ್ನು ಭೇಟಿಯಾದ ಅತೃಪ್ತ ಶಾಸಕರ ತಂಡದಲ್ಲಿ ನಸೀಮ್‌ ಖಾನ್‌, ಪ್ರಣಿತಿ ಶಿಂಧೆ, ಸಂಗ್ರಾಮ್‌ ತೋಪ್ಡೆ, ಅಮಿನ್‌ ಪಟೇಲ್‌ ಮತ್ತು ರೋಹಿದಾಸ್‌ ಪಾಟೀಲ್‌ ಸೇರಿದಂತೆ ಹಲವು ಹಿರಿಯ ಮುಖಂಡರು ಇದ್ದರು. ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ್‌ ಖರ್ಗೆ, ಕೆ.ಸಿ. ವೇಣುಗೋಪಾಲ್‌ ಸಹ ಉಪಸ್ಥಿರಿದ್ದರು ಎಂದು ಮೂಲಗಳು ತಿಳಿಸಿವೆ.

ಸೋಮವಾರ ಕಾಂಗ್ರೆಸ್‌, ಶಿವಸೇನೆ ಮತ್ತು ಎನ್‌ಸಿಪಿಯ 36 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಈವರೆಗೂ ಯಾರಿಗೂ ಖಾತೆ ಹಂಚಿಕೆಯಾಗಿಲ್ಲ. ಇದರ ನಡುವೆಯೇ ಸಚಿವಗಿರಿ ವಂಚಿತರಿಂದ ಬಂಡಾಯದ ಕಹಳೆ ಮೊಳಗಿದೆ.

ಶಿವಸೇನೆಯಲ್ಲೂ ಅಸಮಾಧಾನ
ಶಿವಸೇನೆಯಲ್ಲೂ ಅಸಮಾಧಾನ ಸ್ಫೋಟಗೊಂಡಿದೆ. ಸಂಸದ ಸಂಜಯ್‌ ರಾವತ್‌ ಅವರ ಸಹೋದರ ಸುನೀಲ್‌ ರಾವತ್‌ಗೂ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಸಂಜಯ್‌ ರಾವತ್‌ ಅವರು ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಲು ಇದೇ ಕಾರಣ ಎನ್ನಲಾಗಿದೆ. ಈ ಹಿಂದೆ ಬಿಜೆಪಿ-ಸೇನೆ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ರಾಮದಾಸ್‌ ಕದಮ್‌, ದಿವಾಕರ್‌ ರಾವೊತೆ ಮತ್ತು ರವೀಂದ್ರ ವೈಕರ್‌ ಅವರನ್ನು ಠಾಕ್ರೆ ಕೈಬಿಟ್ಟಿರುವುದು ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಪದಾಧಿಕಾರಿ ರಿಸೈನ್‌: ಮಾಜಿ ಸಚಿವ, ತಮ್ಮ ಕ್ಷೇತ್ರದ ಶಾಸಕ ತಾನಾಜಿ ಸಾವಂತ್‌ ಅವರಿಗೆ ಸಂಪುಟ ಸ್ಥಾನಮಾನ ಸಿಗದಿರುವ ಬಗ್ಗೆ ಅಸಮಾಧಾನಗೊಂಡು ಸೋಲಾಪುರ ಜಿಲ್ಲೆಯ ಪಕ್ಷದ ಪದಾಧಿಕಾರಿ ಶೈಲಾ ಗೋಡ್ಸೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋನಿಯಾಗೆ ರಕ್ತದಲ್ಲಿ ಪತ್ರ
ಸೋಲಾಪುರ ಜಿಲ್ಲಾಯುವ ಕಾಂಗ್ರೆಸ್‌ ಅಧ್ಯಕ್ಷ ನಿತಿನ್‌ ನಾಗ್ನೆ ಅವರು ಹಿರಿಯ ಮುಖಂಡ ಸುಶೀಲ್‌ ಕುಮಾರ್‌ ಶಿಂಧೆ ಪುತ್ರಿ ಪ್ರಣಿತಿ ಶಿಂಧೆಗೆ ಸಂಪುಟದಲ್ಲಿ ಸ್ಥಾನ ದೊರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಎನ್‌ಸಿಪಿ ಶಾಸಕ ಸೋಳಂಕೆ ರಾಜೀನಾಮೆ
ಭಿನ್ನಮತದ ಬಿರುಗಾಳಿಯ ನಡುವೆಯೇ ಬೀಡ್‌ ಜಿಲ್ಲೆಯ ಎನ್‌ಸಿಪಿ ಶಾಸಕ ಪ್ರಕಾಶ್‌ ಸೋಳಂಕೆ ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ. ಸೋಮವಾರ ರಾತ್ರಿಯೇ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ತಮ್ಮ ನಡೆಗೆ ಅಸಮಾಧಾನ ಕಾರಣವಲ್ಲ ಎಂದು ಹೇಳಿದ್ದಾರೆ. ”ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಎಂದರೇನೆ ವಾಕರಿಕೆ ಬಂದಿದೆ. ಇಂತಹ ರಾಜಕೀಯ ಮಾಡಲು ನಾನು ಅನರ್ಹ,” ಎಂದು ಅವರು ಹೇಳಿದ್ದಾರೆ.

ಪುಣೆ ಕಾಂಗ್ರೆಸ್‌ ಕಚೇರಿ ಧ್ವಂಸ
ತಮ್ಮ ನೆಚ್ಚಿನ ನಾಯಕನಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಆಕ್ರೋಶಗೊಂಡ ಭೋರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಂಗ್ರಾಮ್‌ ತೋಪ್ಡೆ ಅವರ ಬೆಂಬಲಿಗರು ಪುಣೆಯಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಪಕ್ಷದ ಮುಖ್ಯಸ್ಥರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಪೀಠೋಪಕರಣ ಜಖಂಗೊಳಿಸಿ ದಾಂಧಲೆ ಮಾಡಿದರು.

ಮೂರು ಪಕ್ಷಗಳು ಸೇರಿ ಸರಕಾರ ರಚಿಸಿರುವುದರಿಂದ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಶಿವಸೇನೆಗೆ ಹೆಚ್ಚಿನ ಆಯ್ಕೆ ಅವಕಾಶಗಳಿಲ್ಲ. ಹೊಸ ಮುಖಗಳಿಗೂ ನಾವು ಅವಕಾಶ ನೀಡಬೇಕು.
-ಸಂಜಯ್‌ ರಾವತ್‌, ಶಿವಸೇನೆ ಮುಖಂಡ

Comments are closed.