ಮನೋರಂಜನೆ

‘ಅವನೇ ಶ್ರೀಮನ್ನಾರಾಯಣ’: 3ನೇ ದಿನದಲ್ಲಿ 30 ಕೋಟಿ

Pinterest LinkedIn Tumblr


ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ್ ಅಭಿನಯದ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಕಂಡಿದೆ. ಅದರಲ್ಲೂ ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ 30 ಕೋಟಿ ಗಳಿಕೆಯನ್ನು ಕಾಣುವ ಮೂಲಕ ಯಶಸ್ಸು ಕಂಡಿದೆ.

ಸಿನಿಮಾ ರಿಲೀಸ್ ಆದ ಮೂರು ದಿನ ಕಳೆದಿದ್ದು, ಚಿತ್ರ 24 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲೇ 450 ಸ್ಕ್ರೀನ್‍ಗಳಲ್ಲಿ ಮೂರು ದಿನಗಳಲ್ಲಿ 5 ಸಾವಿರ ಶೋ ಕಂಡಿದೆ. ಇನ್ನೂ ರಾಜ್ಯದ 50 ಕೇಂದ್ರಗಳಲ್ಲಿ ಪ್ರೀಮಿಯರ್ ಶೋವನ್ನು ಆಯೋಜನೆ ಮಾಡಲಾಗಿತ್ತು. ಅಲ್ಲಿಯೂ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಅದರಿಂದಲೇ ಬರೋಬ್ಬರಿ 3-4 ಕೋಟಿ ಗಳಿಕೆ ಕಂಡಿದೆ.

ಎರಡನೇ ವಾರದಲ್ಲಿ 80ಕ್ಕೂ ಹೆಚ್ಚುವರಿ ಕೇಂದ್ರಗಳಲ್ಲಿ ಚಿತ್ರ ತೆರೆಕಾಣಲಿದೆ. ಹೀಗಾಗಿ ಸಿನಿಮಾ ಒಂದು ವಾರದಲ್ಲಿಯೇ 50-60 ಕೋಟಿ ಗಳಿಕೆ ಕಾಣುವ ಸಾಧ್ಯತೆ ಇದೆ. ಸದ್ಯಕ್ಕೆ ಕನ್ನಡದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಇದೇ ತಿಂಗಳ 27 ರಂದು ಬಿಡುಗಡೆಯಾಗಿತ್ತು. ಜನವರಿ 3ರಂದು ತಮಿಳು ಮತ್ತು ಮಲಯಾಳಂನಲ್ಲಿ, ಜನವರಿ 16 ರಂದು ಹಿಂದಿಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ತೆಲುಗಿನಲ್ಲಿ 36 ಸಾವಿರ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಆಗಿದೆ.

ಈ ಬಗ್ಗೆ ಮಾತನಾಡಿದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮೂರು ದಿನದಲ್ಲಿ ಸಿನಿಮಾ 30 ಕೋಟಿ ಗಳಿಕೆ ಕಂಡಿದೆ. ಈ ಸಿನಿಮಾಗಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ್ದೇವೆ. ನನಗೆ ಕಮರ್ಷಿಯಲ್ ಸಿನಿಮಾ ಮಾಡಿ ಹಣ ಗಳಿಸುವುದು ಮುಖ್ಯವಾಗಿರಲಿಲ್ಲ. ಹೊಸತನದ ಮೇಕಿಂಗ್ ಬೇಕು, ಪ್ರೇಕ್ಷಕರು ಸಿನಿಮಾ ನೋಡುವ ಕ್ರಮ ಬದಲಾಗಬೇಕು. ಅಲ್ಲದೇ ಕನ್ನಡದಲ್ಲಿ ಫ್ಯಾಂಟಸಿ ಸಿನಿಮಾ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದೇ ರೀತಿ ಒಂದು ಸಾಹಸ ಸಿನಿಮಾವನ್ನು ಮಾಡಿದ್ದೇನೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.

Comments are closed.