ಅಂತರಾಷ್ಟ್ರೀಯ

ಟೀ ಶರ್ಟ್‌ನ ಕಾರಣಕ್ಕೆ ಬಾಲಕನನ್ನು ವಿಮಾನವನ್ನೇರಲು ಬಿಡಲಿಲ್ಲ…!

Pinterest LinkedIn Tumblr


ಆ ಹತ್ತು ವರ್ಷದ ಬಾಲಕ ದಕ್ಷಿಣ ಆಫ್ರಿಕಾದ ವಿಮಾನ ಏರಬೇಕಾಗಿತ್ತು. ಆದರೆ, ಏರ್ ಪೋರ್ಟಿನಲ್ಲಿದ್ದ ಅಧಿಕಾರಿಗಳು ಬಾಲಕನನ್ನು ವಿಮಾನ ನಿಲ್ದಾಣದೊಳಗೇ ಬಿಟ್ಟುಕೊಟ್ಟಿಲ್ಲ… ಕಾರಣ, ಆತ ಧರಿಸಿದ್ದ ಟೀಶರ್ಟ್…!

ಇದು ನಡೆದದ್ದು ನ್ಯೂಜಿಲೆಂಡ್ ವಿಮಾನ ನಿಲ್ದಾಣದಲ್ಲಿ. ಅಷ್ಟಕ್ಕೂ ವೆಲ್ಲಿಂಗ್ಟನ್‌ನ ಆ ಹತ್ತು ವರ್ಷದ ಬಾಲಕನಿಗೆ ಪ್ರವೇಶ ನಿರಾಕರಿಸಲು ಕಾರಣ ಆತನ ಟೀಶರ್ಟ್ ಮೇಲಿದ್ದ ಹಾವಿನ ಚಿತ್ರ. ಖಂಡಿತಾ ಇದನ್ನು ನಂಬಲೇಬೇಕು. ಹಾವು ಕಂಡರೆ ಎಲ್ಲರಿಗೂ ಭಯ ನಿಜ. ಆದರೆ, ವಿಮಾನ ನಿಲ್ದಾಣದ ಅಧಿಕಾರಿಗಳು ಟೀಶರ್ಟ್‌ನಲ್ಲಿ ಹಾವಿನ ಚಿತ್ರವಿದೆ ಎಂಬ ಕಾರಣಕ್ಕೆ ಬಾಲಕನಿಗೆ ಪ್ರವೇಶ ನೀಡದೆ ಆತನ ಬಟ್ಟೆಯನ್ನೇ ಬದಲಾಯಿಸಿಕೊಂಡು ಬರಲು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ ಖಂಡಿತಾ ಸರಿ. ಆದರೆ, ಈ ನಿಲ್ದಾಣದ ಅಧಿಕಾರಿಗಳ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಕ ಟೀಶರ್ಟ್ ಬದಲಾಯಿಸಿದ ಬಳಿಕವೇ ಆತನಿಗೆ ವಿಮಾನದೊಳಗೆ ಹೋಗಲು ಅವಕಾಶ ನೀಡಲಾಗಿದೆ.

ಸ್ಟೀವ್ ಲ್ಯೂಕಾಸ್ ಎಂಬ ಬಾಲಕ ಹೆತ್ತವರೊಂದಿಗೆ ದಕ್ಷಿಣ ಆಫ್ರಿಕಾದ ವೆಸ್ಟರ್ನ್ ಕೇಪ್ ಪ್ರಾಂತ್ಯದ ಜಾರ್ಜ್ನಲ್ಲಿರುವ ಅಜ್ಜಿಯನ್ನು ಭೇಟಿಯಾಗಲು ಹೋಗುವಾಗ ಈ ಘಟನೆ ನಡೆದಿತ್ತು. ಸ್ಟೀವ್ ಕಪ್ಪು ಶರ್ಟ್ ಧರಿಸಿದ್ದ. ಅದರಲ್ಲಿ ಹಸಿರು ಹಾವಿನ ಚಿತ್ರವಿತ್ತು. ಆದರೆ, ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಆತಂಕವನ್ನುಂಟು ಮಾಡಬಹುದು ಎಂಬ ಕಾರಣಕ್ಕೆ ಅಧಿಕಾರಿಗಳು ಸ್ವೀವ್ ಬಟ್ಟೆ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ವಿಮಾನ ಪ್ರಯಾಣಿಕರಿಗೆ ಕೆಲವೊಂದು ನಿಯಮಗಳನ್ನೂ ರೂಪಿಸಿದೆ. ಇದರಲ್ಲಿ ಕೆಲವು ನಿಷೇಧಿತ ವಸ್ತುಗಳ ಪಟ್ಟಿಯನ್ನೂ ಮಾಡಿದೆ. ಹಾವಿನ ರೂಪದ ಆಟಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವುದು ನಿಷಿದ್ಧ. ಈ ನಿಯಮಗಳ ಬಗ್ಗೆ ಸ್ವೀವ್ ತಾಯಿಗೆ ಅಧಿಕಾರಿಗಳು ತಿಳಿಸಿದ್ದರು. ಪ್ರಯಾಣಿಕರಿಗೆ ಹಾಗೂ ವಿಮಾನದ ಸಿಬ್ಬಂದಿಯ ಮನಸ್ಸಿಗೆ ಆಘಾತ ತರುವ, ಭಯ ಹುಟ್ಟಿಸುವ ಯಾವುದೇ ವಸ್ತುಗಳನ್ನು ವಿಮಾನ ನಿಲ್ದಾಣದೊಳಗೆ ಕೊಂಡೊಯ್ಯದಂತೆ ತಡೆಯುವ ಎಲ್ಲಾ ಅಧಿಕಾರ ಇಲ್ಲಿನ ಅಧಿಕಾರಿಗಳಿಗೆ ಇರುತ್ತದೆ ಎಂದು ವಿಮಾನಯಾನ ಸಂಸ್ಥೆ ಕೂಡಾ ಈ ಬಗ್ಗೆ ತಿಳಿಸಿದೆ.

ಈ ಹಿಂದೆ ಹೆಬ್ಬಾವೊಂದು ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್‌ಗೆ ವಿಮಾನದ ಅಂಡರ್‌ಕ್ಯಾರೇಜ್‌ನಲ್ಲಿ ಕುಳಿತು ಹೋಗಿತ್ತು. ವಿಮಾನ ನಿಲ್ದಾಣದಲ್ಲಿ ಇನ್ನೊಂದು ಫ್ಲೈಟ್‌ನ ಪೈಲಟ್ ವಿಷಯ ತಿಳಿಸಿದ್ದರಿಂದ ಈ ಸಂಗತಿ ಗೊತ್ತಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಈ ಹೆಬ್ಬಾವು ಅಂದು ಸಾವನ್ನಪ್ಪಿತ್ತು.

ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಸಣ್ಣ ಹಾವೊಂದು ಮಹಿಳೆಯೊಬ್ಬರ ಲಗೇಜ್ ಪಕ್ಕದಲ್ಲಿ ಇಟ್ಟಿದ್ದ ಶೂನೊಳಗೆ ಕುಳಿತು 14,900 ಕಿಲೋಮೀಟರ್ ಪ್ರಯಾಣಿಸಿತ್ತು. ಇದು ಸಾಕಷ್ಟು ಸುದ್ದಿಯಾಗಿತ್ತು.

Comments are closed.