ಕರಾವಳಿ

ಮಂಗಳೂರು ಗೋಲಿಬಾರ್ : ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಿದ ತೃಣಮೂಲ ಕಾಂಗ್ರೆಸ್‌

Pinterest LinkedIn Tumblr

ಮಂಗಳೂರು, ಡಿಸೆಂಬರ್.28: : ಪೌರತ್ವ ಕಾಯ್ದೆ ತಿದ್ದುಪಡಿಸಿ ವಿರೋಧಿಸಿ ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಸಂದರ್ಭ ನಡೆದ ಗೋಲಿಬಾರ್ ನಲ್ಲಿ ಬಲಿಯಾದ ಇಬ್ಬರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಹಾರ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ತೃಣಮೂಲ ಕಾಂಗ್ರೆಸ್‌ನ ಇಬ್ಬರು ನಾಯಕರು ಗೋಲಿಬಾರ್ ನಲ್ಲಿ ಮೃತಪಟ್ಟ ಎರಡೂ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದರು.

ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಬಲಿಯಾದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ತೃಣಮೂಲ ಕಾಂಗ್ರೆಸ್ ನ ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮತ್ತು ರಾಜ್ಯಸಭಾ ಸದಸ್ಯರಾದ ಎಂಡಿ ನದೀಮುಲ್ ಹಕ್ ಅವರು ಎರಡೂ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ತೃಣಮೂಲ ಕಾಂಗ್ರೆಸ್ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿಸಿ ವಿರೋಧಿಸಿ ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಸಂದರ್ಭ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಗೋಲಿಬಾರ್ ನಡೆಸಿದ್ದರು. ಈ ಸಂದರ್ಭ ಕುದ್ರೋಳಿಯ ನೌಸೀನ್ ಮತ್ತು ಕಂದಕ್ ನ ಜಲೀಲ್ ಎಂಬವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಪರಿಹಾರ ತಡೆಹಿಡಿದ ಮುಖ್ಯಮಂತ್ರಿ :

ಮೃತರ ಕುಟುಂಬಕ್ಕೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪರಿಹಾರ ಚೆಕ್ ವಿತರಿಸಲಾಗಿದೆ. ಮಾತ್ರವಲ್ಲದೇ ಕೇರಳದ ಮುಸ್ಲಿಂ ಮುಖಂಡರ ನಿಯೋಗವು ಮಂಗಳೂರಿಗೆ ಆಗಮಿಸಿ ಮೃತರ ಮನೆಗಳಿಗೆ ಭೇಟಿ ನೀಡಿ ಈಗಾಗಲೇ ಪರಿಹಾರ ಒದಗಿಸಿದ್ದಾರೆ.

ಈ ಮಧ್ಯೆ ಸರಕಾರದ ವತಿಯಿಂದ ಮೃತರ ಕುಟುಂಬಕ್ಕೆ ತಲಾ 10ಲಕ್ಷ ರೂ. ಪರಿಹಾರ ನೀಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರೂ.. ಕೊನೆಗಳಿಗೆಯಲ್ಲಿ ಮೃತರು ಆರೋಪಿಗಳ ಸ್ಥಾನದಲ್ಲಿದ್ದಾರೆ ಎಂಬ ಪೊಲೀಸ್ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಪರಿಹಾರವನ್ನು ತಡೆಹಿಡಿದಿದ್ದರು. ಮಾತ್ರವಲ್ಲದೇ ಗೋಲಿಬಾರ್ ನಲ್ಲಿ ಮೃತಪಟ್ಟವರು ಆರೋಪಿಗಳೆಂದು ಸಾಭೀತಾದರೆ ಒಂದು ರೂಪಾಯಿ ಕೂಡ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಿಐಡಿ ಮತ್ತು ಮ್ಯಾಜಿಸ್ಟ್ರೇಯಲ್‌ ತನಿಖೆ : 

ಗೋಲಿಬಾರ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿ ಮತ್ತು ಮ್ಯಾಜಿಸ್ಟ್ರೇಯಲ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಡ್ ನೇತೃತ್ವದ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದ್ದು ತನಿಖೆ ಮುಂದುವರಿದಿದೆ.

Comments are closed.