ಕರಾವಳಿ

ತೆಕ್ಕಟ್ಟೆ ಮಾಲಾಡಿಯಲ್ಲಿ ‘ಆಪರೇಶನ್ ಚೀತಾ’ ಸಕ್ಸಸ್- ಒಂದೂವರೆ ವರ್ಷದಲ್ಲಿ 3 ಚಿರತೆ ಸೆರೆ!

Pinterest LinkedIn Tumblr

ಕುಂದಾಪುರ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಜನರಿಗೆ ನಿರಂತರವಾಗಿ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದ ಘಟನೆ ಉಡುಪಿ ಜಿಲ್ಲೆ ತೆಕ್ಕಟ್ಟೆ ಗ್ರಾಮಪ್ಂಚಾಯತ್ ವ್ಯಾಪ್ತಿಯ ಮಾಲಾಡಿ ತೋಟದಲ್ಲಿ ನಡೆದಿದ್ದು ಗುರುವಾರ ಬೆಳಿಗ್ಗೆ ಸೆರೆಯಾದ ಚಿರತೆ ನೋಡಲು ನೂರಾರು ಮಂದಿ ಆಗಮಿಸಿದ್ದರು.

ಒಂದೂವರೆ ವರ್ಷದಲ್ಲಿ 3 ಚಿರತೆ ಸೆರೆ!
ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ ಕಳೆದ ಒಂದೆರಡು ವರ್ಷದಿಂದ ಚಿರತೆ ಕಾಟ ಹೆಚ್ಚಿತ್ತು. ಈ ಹಿನ್ನೆಲೆ ಕಳೆದ ವರ್ಷ ಅರಣ್ಯ ಇಲಾಖೆ ಬೋನಿಟ್ಟಿದ್ದು ೨೦೧೮ ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಇದೇ ವರ್ಷ ಮತ್ತೆ ಬೋನಿಟ್ಟಿದ್ದು ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಚಿರತೆ ಸೆರೆಯಾಗಿತ್ತು. ತದನಂತರೂ ಚಿರತೆ ಕಾಟ ಮುಂದುವರೆದಿದ್ದು ನವೆಂಬರ್ ತಿಂಗಳಲ್ಲಿ ಮತ್ತೆ ಬೋನಿಟ್ಟ ಇಲಾಖೆ ‘ಆಪರೇಶನ್ ಚೀತಾ’ಗೆ ಮುಂದಾಗಿತ್ತು. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ನಿತ್ಯ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಸಹಕಾರ ನೀಡುತ್ತಿದ್ದರು.

ಒಂದೂವರೆ ವರ್ಷದಲ್ಲಿ ಮೂರು ಚಿರತೆ ಸೆರೆಯಾದ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿತ್ತು. ಹಾಡುಹಗಲಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಕೂಡ ಪೋಷಕರು ಬೆದರಿದ್ದರು. ಇನ್ನೂ ಕೂಡ ಚಿರತೆ ಇರುವ ಬಗ್ಗೆ ಸಾರ್ವಜನಿಕರು ಗುಮಾನಿ ವ್ಯಕ್ತಪಡಿಸಿದ್ದು ಮತ್ತೆ ಬೋನ್ ಇಟ್ಟು ಕಾರ್ಯಾಚರಣೆ ಮುಂದುವರೆಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಅರಣ್ಯಾಧಿಕಾರಿ-ಸ್ಥಳೀಯರ ಮದ್ಯೆ ಚಕಮಕಿ!
ಇಂದು ಬೋನಿಗೆ ಬಿದ್ದ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ನಾಗರಿಕರು ಜಮಾಯಿಸಿದ್ದರು. ಬೋನಲ್ಲಿದ್ದ ಚಿರತೆಯನ್ನು ನೋಡುತ್ತಿರುವಾಗ ಸ್ಥಳೀಯರ ಮೇಲೆ ಅರಣ್ಯಾಧಿಕಾರೊಬ್ಬರು ಗರಂ ಆಗಿದ್ದು ಕೇಸು ಹಾಕುವ ಬೆದರಿಕೆ ಹಾಕಿದ್ದು ಕೆಲ ಕಾಲ ಸಂಘರ್ಷಕ್ಕೆ ಕಾರಣವಾಯಿತು. ಇಲಾಖೆ ಬೋನಿಟ್ಟಿದ್ದು ಚಿರತೆ ಸೆರೆಗೆ ಸಹಕರಿಸಿದವರು, ನಿತ್ಯ ಇಲ್ಲಿ ಭಯದ ನಡುವೆಯೇ ವಾಸಿಸುತ್ತಿರುವವರು, ಜಾನುವಾರು ಕಳೆದುಕೊಂಡವರ ಬಳಿ ಉಡಾಫೆ ಮಾತನಾಡದಂತೆ ತೆಕ್ಕಟ್ಟೆ ಗ್ರಾ.ಪಂ ಸದಸ್ಯರಾದ ವಿಜಯ್, ಸಂಜೀವ ದೇವಾಡಿಗ, ಸ್ಥಳೀಯರಾದ ಮುತ್ತಾರಿಫ್ ತೆಕ್ಕಟ್ಟೆ ಮೊದಲಾದವರು ಆಕ್ರೋಷ ವ್ಯಕ್ತಪಡಿಸಿದರು. ಮಾಜಿ ಗ್ರಾ.ಪಂ ಅಧ್ಯಕ್ಷ ಮಲ್ಯಾಡಿ ಶಿವರಾಂ ಶೆಟ್ಟಿ ಈ ವೇಳೆ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸೆರೆಯಾದ ಚಿರತೆಯನ್ನು ರಕ್ಷಿತಾರಣ್ಯಕ್ಕೆ ರವಾನಿಸಲಾಗಿದೆ.

(ಚಿತ್ರ.ವರದಿ- ಯೋಗೀಶ್ ಕುಂಭಾಸಿ)

Comments are closed.