ಕರಾವಳಿ

`ಕೊಟ್ಟ ಸ್ಥಾನಮಾನ ಶಾಶ್ವತವಾಗಿರುತ್ತೆ’: ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಅಭಯ ನೀಡಿದ ಶಿವರಾಯ!

Pinterest LinkedIn Tumblr

ಕುಂದಾಪುರ: ಈ ಹಿಂದೆ ಸಿಕ್ಕ ಹುದ್ದೆಯೂ ಮತ್ತೆ ಸಿಕ್ಕಿದೆ. ಸನ್ನಿಧಾನಕ್ಕೆ ಸೇವೆ ನೀಡಿದ್ದು ಮುಂದೆಯೂ ನೀಡುವ ಅವಕಾಶ ಸಿಗುತ್ತೆ. ಕೊಟ್ಟ ಸ್ಥಾನಮಾನ ಶಾಶ್ವತವಾಗಿರಲಿದೆ ಎಂದು ಉಡುಪಿ ಜಿಲ್ಲೆಯ ಹಿಲಿಯಾಣದ ಶ್ರೀ ಬ್ರಹ್ಮ ಬೈದರ್ಕಳ ಗರೇೂಡಿಯ ಶಿವರಾಯ ದೈವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಯ ನೀಡಿದ್ದಾರೆ. ಶನಿವಾರ ತಡರಾತ್ರಿ 12 ಗಂಟೆ ಬಳಿಕ ಹಿಲಿಯಾಣ ಗರೋಡಿಯ ಕಾಯದ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ದೈವ ಅಭಯ ನೀಡಿ ಪ್ರಸಾದ ನೀಡಿದ್ದು ಈ ವಿಡಿಯೋ ಇದೀಗಾ ವೈರಲ್ ಆಗಿದೆ.

ಈ ಮೊದಲು ಮಾತನಾಡಿದ ಸಚಿವರು, ಬಡವರು, ಮೇಲು-ಕೀಳು ವರ್ಗ ಒಟ್ಟಾಗಿ ಕೆಲಸ ಮಾಡಲು ದೈವಸ್ಥಾನಗಳು ಹಾಗೂ ಗರೋಡಿಗಳು ಸಹಕಾರಿ. ಸರಕಾರದ ಪರವಾಗಿ ನನ್ನ ಇತಿಮಿತಿಯೊಳಗೆ ಕೆಲಸ ಮಾಡಿದ್ದು ಇದಾಗಲೇ ೫೫ ಕೋಟಿ ರೂ. ದೇವಸ್ಥಾನಗಳಿಗೆ ನೀಡಲಾಗಿದೆ. ಇಲ್ಲಿನ ಗರೋಡಿಗೆ ಸರಕಾರದಿಂದ ಬೇಕಾಗುವ ಸಹಕಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿನ ಪ್ರಸಾದ ಸಿಕ್ಕಿದ್ದು ಮುಂದಿನ ಒಳ್ಳೆಯ ಕೆಲಸ ಮಾಡಲು ಆಶಿರ್ವಾದವಾಗಲಿದೆ ಎಂದರು. ಈ ಸಂದರ್ಭ ಬ್ರಹ್ಮಭೈದರ್ಕಳ ಗರೇೂಡಿ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿ ಮೊದಲಾದವರಿದ್ದರು.

ಬ್ರಹ್ಮಾನಂದ ವೇದಿಕೆ ಉದ್ಘಾಟನೆ
ಜಿಲ್ಲೆಯ ಗೋಳಿಯಂಗಡಿ ಸಮೀಪದ ಹಿಲಿಯಾಣದಲ್ಲಿನ ಸುಮಾರು 400 ವರ್ಷದ ಇತಿಹಾಸವುಳ್ಳ ಶ್ರೀ ಬ್ರಹ್ಮ ಬೈದರ್ಕಳ ಗರೇೂಡಿಯಲ್ಲಿ ಕಾಯದ ಪೂಜೆ ಹಾಗೂ ಬ್ರಹ್ಮಾನಂದ ವೇದಿಕೆ ಉದ್ಘಾಟನೆ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ನಡೆಯಿತು.

ಸಂದೇಶ ಕಿಣಿ ಚಾರಿಟೇಬಲ್ ಟ್ರಸ್ಟ್ ಬೆಳ್ವೆ ಇದರ ಅಧ್ಯಕ್ಷ ಸತೀಶ್ ಕಿಣಿ ಅವರು ಬ್ರಹ್ಮಾನಂದ ವೇದಿಕೆಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ದುಡಿಮೆಯ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ನೀಡುವ ಕಾರ್ಯವಾಗಬೇಕು. ಧಾರ್ಮಿಕ ಕೇಂದ್ರಗಳ ಮೂಲಕ ಲೋಕೋದ್ದಾರದ ಕೆಲಸವಾಗಬೇಕು ಎಂದರು.ಬ್ರಹ್ಮಭೈದರ್ಕಳ ಗರೇೂಡಿ ಅಧ್ಯಕ್ಷರಾದ ವೈ. ಕರುಣಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಯಮಿ ಗಣೇಶ ಕಿಣಿ ಉದ್ಘಾಟಿಸಿದರು.ಬ್ರಹ್ಮಾನಂದ ವೇದಿಕೆಯನ್ನ ಕೊಡುಗೆ ಕೊಟ್ಟ ವೇದಮೂರ್ತಿ ಹಳ್ಳಿ ‌ವೆಂಕಟೇಶ ಭಟ್ ಇವರಿಗೆ ಬೆಳ್ಳಿಯ ಕಾಲು ದೀಪದಲ್ಲಿ ತುಪ್ಪದ ದೀಪ ಬೆಳಗಿಸಿಕೊಡುವ ಮ‌ೂಲಕ ಸನ್ಮಾನಿಸಲಾಯಿತು.

ಮುಖ್ಯ ಅಥಿತಿಗಳಾಗಿ ಶ್ರೀ ಬ್ರಹ್ಮಬೈದರ್ಕಳ ಗರೇೂಡಿ ಹಿಲಿಯಾಣದ ಮುಕ್ಕಾಲಿಯವರಾದ ತಾರಾನಾಥ ಶೆಟ್ಟಿ, ಆವರ್ಸೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಮೇೂದ ಹೆಗ್ಡೆ, ಮಾಜಿ ಅಧ್ಯಕ್ಷ ಶಿವರಾಮ ಪೂಜಾರಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಜ್ಷ ಜಯರಾಮ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಸುಶೀಲ ನಾಯ್ಕ, ಗರೋಡಿಯ ಕೇೂಶಾದಿಕಾರಿ ಸಂತೇೂಷ ಕುಮಾರ್ ಶೆಟ್ಟಿ, ಅರ್ಚಕರಾದ ಶೀನ ಪೂಜಾರಿ, ಆವರ್ಸೆ ಗ್ರಾ.ಪಂ. ಸದಸ್ಯ ವಿಜಯಕುಮಾರ್ ಶೆಟ್ಟಿ ಇದ್ದರು.

ಹಿಲಿಯಾಣದ ಕೋಟಿ ಚೆನ್ನಯ್ಯ ಯೂತ್ ಫ್ರೆಂಡ್ಸ್ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಸ್ವಾಗತಿಸಿದರು. ಗಣೇಶ ಅರಸಮ್ಮನಕಾನು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.