ಕರಾವಳಿ

ಫ್ಲಾಸ್ಟಿಕ್ ಮುಕ್ತ ‘ಕೊಡಿ ಹಬ್ಬ’ ಆಚರಣೆಗೆ ಒತ್ತು: ಪ್ಲಾಸ್ಟಿಕ್ ಚೀಲ ತಂದ್ರೆ ದೇವಸ್ಥಾನ ಪ್ರವೇಶವಿಲ್ಲ!

Pinterest LinkedIn Tumblr

ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬವನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವಾಗಿಸಲು ಸಾರ್ವಜನಿಕರು ಹಾಗೂ ಭಕ್ತಾದಿಗಳ ಸಹಕಾರ ಬೇಕಿದೆ ಎಂದು ಕೋಟೇಶ್ವರ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ ಗ್ರಾಮಪಂಚಾಯತ್, ಬೀಜಾಡಿ ಗ್ರಾಮಪಂಚಾಯತ್, ಗೋಪಾಡಿ ಗ್ರಾಮಪಂಚಾಯತ್ ಹಾಗೂ ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ಸಂಸ್ಥೆಯಿಂದ ದೇವಸ್ಥಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಜಂಟಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಚೀಲ ತಂದರೆ ಪ್ರವೇಶವಿಲ್ಲ!
ದೇವಸ್ಥಾನವನ್ನು ಕಟ್ಟುನಿಟ್ತಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಸುತ್ತೋಲೆಯೂ ಕೂಡ ಇದೆ. ದೇವರಿಗೆ ಪೂಜಿಸಲ್ಪಡುವ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತಂದರೆ ಅವರನ್ನು ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ. ಭಕ್ತರಿಗೆ ಸ್ವಯಂಸೇವಕರು ಈ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಲಿದ್ದಾರೆ. ಅಲ್ಲದೆ ಜಾತ್ರೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಪ್ಲಾಸ್ಟಿಕ್ ಉಪಯೋಗಿಸದಂತೆ ನಿರ್ಬಂಧಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುವವರು ಪ್ಲಾಸ್ಟಿಕ್ ಬಳಸಿದಲ್ಲಿ ಸೂಕ್ತ ದಂಡ ಹಾಗೂ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.

ಈಗಾಗಲೇ ಸರ್ಕಾರ SUP (Single Use Plastic)ನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಅಲ್ಲದೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಲು ಪಣತೊಟ್ಟಿದೆ. ಪ್ಲಾಸ್ಟಿಕ್ ನಿಂದಾಗುವ ಅನಾಹುತಗಳ ಬಗ್ಗೆ ಈಗಾಗಲೇ ನಾಗರಿಕರಿಗೆ ಮನವರಿಕೆ ಆಗಿದೆ.ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ಸ್ಪಷ್ಟ ಆದೇಶದಂತೆ ಕೊಡಿ ಹಬ್ಬದಲ್ಲಿ ಪ್ಲಾಸ್ಟಿಕ್ ಬಳಸದೆ ಹಬ್ಬವನ್ನು ಆಚರಿಸಿ ಮಾದರಿಯಾಗಬೇಕಿದೆ. ಅಂಗಡಿಗಳ ಮಾಲಿಕರು ಕೂಡ ಗ್ರಾಹಕರಿಗೆ ಪ್ಲಾಸ್ಟಿಕ್ ನೀಡಬಾರದು, ಪರಿಸರ ಹಾನಿ ಮಾಡುವ ವಸ್ತುಗಳನ್ನು ಬಳಸದಂತೆ ಗ್ರಾಮಪಂಚಾಯತ್ ಹಾಗೂ ಆಡಳಿತ ಮಂಡಳಿ ಎಚ್ಚರಿಕೆ ನೀಡಬೇಕು ಎಂದು ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್ ಹೇಳಿದರು.

ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ರುವಾರಿ ಭರತ್ ಬಂಗೇರ ಮಾತನಾಡಿ, ಜನರಲ್ಲಿ ಫ್ಲಾಸ್ಟಿಕ್ ವಸ್ತುಗಳಿಂದಾಗುವ ಅನಾಹುತದ ಬಗ್ಗೆ ಎಚ್ಚರಿಕೆ ನೀಡಲು ಹಬ್ಬದಲ್ಲಿ ಒಂದು ಸ್ಟಾಲ್ ನಿರ್ಮಿಸಿ ಅಲ್ಲಿ ಜಾಗ್ರತಿ ಕಾರ್ಯಕ್ರಮ, ವಿಡಿಯೋ ಮೂಲಕ ತಾಜ್ಯ ಸಮಸ್ಯೆ ಕುರಿತು ಅರಿವು ಮೂಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಾತ್ರೆಯಲ್ಲಿ ಸಹಸ್ರಾರು ಜನರು ನೆರೆಯುವ ಕಾರಣ ಈ ಅಭಿಯಾನ ಯಶಸ್ವಿಯಾಗಲಿದ್ದು ಜನರು ಕೂಡ ಸ್ಪಂದಿಸುವ ಭರವಸೆ ಇದೆ ಎಂದರು.

ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಗೋಪಾಲಕೃಷ್ಣ, ಬೀಜಾಡಿ ಗ್ರಾಮ ಪಂಚಾಯತ್ ನ ಸದಸ್ಯ ವಾದಿರಾಜ ಹೆಬ್ಬಾರ್, ಸಮಾಜ ಸೇವಕ ಗಣೇಶ್ ಪುತ್ರನ್, ಕ್ಲೀನ್ ಕುಂದಾಪುರ ಫ್ರಾಜೆಕ್ಟ್ ರುವಾರಿ ಭರತ್ ಬಂಗೇರ, ಸದಸ್ಯರಾದ ಅರುಣ್ ಕುಂದಾಪುರ ,ಶಶಿಧರ ಹೆಚ್ ಎಸ್, ಸುಹಿತ್ ಬಂಗೇರ,ಸತ್ಯನಾರಾಯಣ ಮಂಜ, ರೋಹನ್ ಬಿ, ನಾಗಭೂಷಣ್ ಕಾಮತ್ , ಸಂತೋಷ್ ಕಾಮತ್, ಪವಿತ್ರ ಕಾಮತ್, ಪ್ರತೀಕ್ಷಾ ಕಾಮತ್ ಅಕ್ಷಯ್ ಮೊದಲಾದವರು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.