ಕರಾವಳಿ

ಕೊನೆ ಕ್ಷಣದಲ್ಲಿ ಕೈಕೊಟ್ಟ ವರ: ಬೈಂದೂರಿನಲ್ಲಿ ನಿಂತು ಹೋಯ್ತು ಮದುವೆ

Pinterest LinkedIn Tumblr

ಕುಂದಾಪುರ: ಕೊನೆ ಕ್ಷಣದಲ್ಲಿ ಮದುವೆಯ ವರ ನಾಪತ್ತೆಯಾದ ಕಾರಣ ಬೈಂದೂರಿನ ಯಡ್ತರೆಯಲ್ಲಿ ನವೆಂಬರ್‌ 29ರ ಶುಕ್ರವಾರ ನಡೆಯಬೇಕಿದ್ದ ವಿವಾಹವು ನಿಂತು ಹೋದ ಘಟನೆ ನಡೆದಿದ್ದು ವಧುವಿನ ಮನೆಯವರು ಕಂಗಾಲಾಗಿದ್ದಾರೆ. ಕುಂದಾಪುರ ತಾಲೂಕಿನ ಬಳ್ಕೂರಿನ ರಾಮಚಂದ್ರ ಶೇರುಗಾರ್ ಎನ್ನುವರ ಪುತ್ರ ಪ್ರವೀಣ್ ಕುಮಾರ್‌ ನಾಪತ್ತೆಯಾದ ವರ. ಈತ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ.

ಕಳೆದ ನಾಲ್ಕು ತಿಂಗಳ ಹಿಂದೆ ಬೈಂದೂರು ಸಮೀಪದ ಯುವತಿಯೊಂದಿಗೆ ಬಳ್ಕೂರು ನಡುಮನೆ ನಿವಾಸಿ ಪ್ರವೀಣ್ ಕುಮಾರ್‌ ಅವರ ನಿಶ್ಚಿತಾರ್ಥ ನಡೆದಿದ್ದು ನ.೨೯ ರಂದು ವಿವಾಹ ದಿನ ನಿಗದಿಯಾಗಿತ್ತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪ್ರವೀಣ್ ನವೆಂಬರ್‌ 26ರಂದು ಊರಿಗೆ ಬರುತ್ತೇನೆಂದು ಮನೆಯಲ್ಲಿ ಹೇಳಿದ್ದ ಆತ ಊರಿಗೆ ಬಾರದೆ ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದ. ಈ ಹಿನ್ನಲೆಯಲ್ಲಿ ಆತನ ತಂದೆ ಕುಂದಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದು ಪ್ರವೀಣ್ ಬೆಂಗಳೂರಿನಲ್ಲಿಯೇ ಇರುವ ಬಗ್ಗೆ ಮಾಹಿತಿಗಳಿವೆ ಎನ್ನಲಾಗಿದೆ. ಅಲ್ಲದೇ ಪ್ರವೀಣ್ ಈ ಮೊದಲೇ ವಿವಾಹವಾಗಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿದೆಯಾದರೂ ಅದು ಖಚಿತವಾಗಿಲ್ಲ.

ವರ ನಾಪತ್ತೆಯಾದ ಹಿನ್ನಲೆಯಲ್ಲಿ ವಧುವಿನ ಮನೆಯವರು ದಿಘ್ಬ್ರಾಂತರಾಗಿದ್ದಾರೆ. ಮನೆಮಗಳ ಮದುವೆಗಾಗಿ ಬಹಳಷ್ಟು ಖರ್ಚು ಮಾಡಿದ್ದು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

Comments are closed.