ಕರಾವಳಿ

ರಂಗಸ್ಥಳದಿಂದ ಕೆಳಗಿಳಿಸಿರುವುದು ಪೂರ್ವ ನಿರ್ಧಾರಿತ ಹಾಗೂ ಷಡ್ಯಂತ್ರ : ಪ್ರಮಾಣಕ್ಕೆ ಸಿದ್ದ ಎಂದ ಪಟ್ಲ ಸತೀಶ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಕಟೀಲು ಮೇಳದ ಈ ಸಲದ ತಿರುಗಾಟದಲ್ಲಿ ನಾನು ಇಲ್ಲ ಎಂಬ ಯಾವುದೇ ಮಾಹಿತಿ ನನಗೆ ರಂಗಸ್ಥಳದಿಂದ ಕೆಳಗಿಳಿಯುವ ತನಕ ಯಾರಿಂದಲೂ ಬರಲಿಲ್ಲ. ಈ ಬಗ್ಗೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿಧ್ಥನಿದ್ದೇನೆ ಎಂದು ಶ್ರೀ ಕಟೀಲು ಮೇಳದ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

ಕಟೀಲು ಯಕ್ಷಗಾನದ ಈ ವರ್ಷದ ತಿರುಗಾಟದ ಮೊದಲ ದಿನದ ಸೇವೆಯಾಟದಲ್ಲಿ ಭಾಗವತಿಕೆ ಅಣಿಯಾಗುತ್ತಿದ್ದ ಪಟ್ಲ ಸತೀಶ್ ಶೆಟ್ಟಿಯವರನ್ನು ರಂಗಸ್ಥಳದಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ ಅವರನ್ನು ಆಶಿಸ್ತು ಮತ್ತು ಮೇಳದ ಅವಹೇಳನದ ಕಾರಣದಿಂದ ಮೇಳದಿಂದ ಹೊರಗಿಡಲಾಗಿದೆ ಎಂದಿದ್ದರು.

ಈ ಬಗ್ಗೆ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಪಟ್ಲ ಸತೀಶ್ ಶೆಟ್ಟಿ ಅವರು, ಕಟೀಲು ಯಕ್ಷಗಾನ ಮೇಳದಲ್ಲಿ ಕಳೆದ 19ವರ್ಷ ತಿರುಗಾಟ ಮಾಡಿದ್ದೇನೆ. ಮೇಳದ ನಿಯಮ ಉಲ್ಲಂಘಿಸಿಲ್ಲ. ಕಲೆಗೆ ಅಪಚಾರ ಮಾಡಿಲ್ಲ. ಆದರೆ ಇದೀಗ ಕಟೀಲು ಮೇಳದ ಆಡಳಿತ ಮಂಡಳಿಯವರು ಮಾಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ಆಧಾರ ರಹಿತವಾಗಿದೆ. ಈ ಬಗ್ಗೆ ಯಾವ ಕ್ಷೇತ್ರದಲ್ಲಿಯೂ ಪ್ರಮಾಣ ಮಾಡಲು ತಾನು ಸಿದ್ಧನಾಗಿರುವುದಾಗಿ ತಿಳಿಸಿದರು.

ಕಟೀಲು ಮೇಳದ ಪ್ರಥಮ ಸೇವೆಯಾಟದ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ನನ್ನನು ಹಿಮ್ಮೆಳನದ ವೇದಿಕೆಯಿಂದ ಕೆಳಗಿಸುವ ಮೂಲಕ ಕಲಾವಿದನಿಗೆ ಅಪಚಾರ ವೆಸಗಿದ್ದಾರೆ. ಈ ರೀತಿಯ ಅವಮಾನ ಯಾವ ಕಲಾವಿದರಿಗೂ ಇನ್ನು ಮುಂದೆ ಆಗಬಾರದು. ಈ ಪ್ರಕರಣಕ್ಕೆ ನಾನು ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧನಾಗಿರುವುದಾಗಿ ಎಂದು ಹೇಳಿದರು.

ನಾನು ಕಟೀಲು ಮೇಳದ ಯಜಮಾನರು ನೀಡಿದ ನಿರ್ದೇಶನ, ಸೂಚನೆಯನ್ನು ಉಲ್ಲಂಘನೆ ಮಾಡಿಲ್ಲ . ನನಗೆ ಮೇಳದ ಭಾಗವತಿಕೆ ಮಾಡಬಾರದೆಂದು ನಾನು ರಂಗಸ್ಥಳಕ್ಕೆ ಬರುವವರೆಗೂ ನನಗೆ ಯಾರೂ ಸೂಚನೆ ನೀಡಿಲ್ಲ. ನನ್ನನ್ನು ರಂಗಸ್ಥಳದಿಂದ ಕೆಳಗಿಳಿಸಿರುವುದು ಪೂರ್ವ ನಿರ್ಧಾರಿತ ಹಾಗೂ ಷಡ್ಯಂತ್ರವಾಗಿದೆ ಪಟ್ಲ ಸತೀಶ್ ಶೆಟ್ಟಿ ಅವರು ಆರೋಪಿಸಿದರು .

ಕಟೀಲು ಮೇಳದಲ್ಲಿ ಪ್ರಸ್ತುತ ಮೇಳದ ಆಡಳಿತ ಮಂಡಳಿಯಿಂದ ಕಲಾವಿದರ ಮೇಲೆ ದೌರ್ಜನ್ಯ ಆಗುತ್ತಿರುವ ಹಿನ್ನಲೆಯಲ್ಲಿ ಮೇಳವನ್ನು ಮುಜರಾಯಿ ಇಲಾಖೆಗೆ ವಹಿಸಿಕೊಡಬೇಕು . ನಾನು ಇನ್ನು ಮುಂದೆಯೂ ಕಟೀಲು ದೇವಿಯ ಸೇವೆ ಮಾಡಲು ಸಿದ್ದನಿದ್ದೇನೆ . ಇತರ ಮೇಳಕ್ಕೆ ಹೋಗುವುದಿಲ್ಲ . ನನ್ನನ್ನು ಮೇಳದಿಂದ ಕೈ ಬಿಡಲಾಗಿದೆ ಎಂದು ನಾನು ರಂಗಸ್ಥಳದ ವೇದಿಕೆ ಮೇಲೇರಿದ ಮೇಲೆ ತಿಳಿಸಿ ನನ್ನನು ಕೆಳಗಿಳಿಸಿರುವುದು ಕಲೆಗೆ ಮತ್ತು ಕಲಾವಿದರಿಗೆ ಮಾಡಿರುವ ಅವಮಾನ. ನನ್ನನ್ನು ರಂಗಸ್ಥಳದಿಂದ ಕೆಳಗಿಳಿಸಿರುವುದು ನ್ಯಾಯಾಲಯ ನೀಡಿದ ನಿರ್ದೇಶನದ ಉಲ್ಲಂಘನೆಯಾಗಿದ್ದು, ಈ ಬಗ್ಗೆ ನ್ಯಾಯಾಂಗ ನಿಂದನೆ ದೂರನ್ನು ದಾಖಲಿಸಲಾಗುವುದು ಎಂದರು.

ಮೇಳದ ಕಲಾವಿದರಿಗೆ ತೊಂದರೆಯಾದಾಗ ನಾನು ಅವರ ಪರ ನಿಂತಿದ್ದೇನೆ. ಅವರಿಗೆ ನೆರವು ನೀಡಿದ್ದೇನೆ. ಕೆಲವರನ್ನು ಮೇಳಕ್ಕೆ ಮತ್ತೆ ಸೇರಿಸಬೇಕು ಎಂದು ಮನವಿ ಮಾಡಿದ್ದೇನೆ. ಆದರೆ ನನ್ನ ಮನವಿಗೆ ಯವೂದೇ ಸ್ಪಂದನೆ ದೊರೆಯಲಿಲ್ಲ. ನಾನು ಈ ಮೊದಲು ಕಲಾವಿದರ ಹಿತ್ತಾಸಕ್ತಿ ಕಾಯ್ದುಕೊಳ್ಳಲು ಶ್ರಮಿಸಿದ್ದು , ಮುಂದೆಯೂ ಕಲಾವಿದರ ಹಿತಾಸಕ್ತಿ ಕಾಯ್ದುಕೊಳ್ಳುವ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದವರು ಹೇಳಿದರು.

ನಾನು ಶ್ರೀ ಕ್ಷೇತ್ರ ಕಟೀಲಿನ ಭಕ್ತ, ಯಕ್ಷಗಾನ ಕಲೆಯನ್ನು ಆ ತಾಯಿಯ ಸೇವೆ ಎಂದು ಪೂಜ್ಯ ಭಾವನೆಯಿಂದ ಮಾಡುತ್ತಿದ್ದೇನೆ. ಆದರೆ ಕಲಾವಿದರನ್ನು ನಡೆಸಿ ಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಈ ಬಗ್ಗೆ ನಾನು ಸಂಬಂಧ ಪಟ್ಟವರಿಗೆ ದೂರು ನೀಡಿದ್ದೇನೆ ಎಂದು ಸತೀಶ್ ಶೆಟ್ಟಿ ತಿಳಿಸಿದರು.

Comments are closed.