ಕರಾವಳಿ

ಮನಪಾ ಚುನಾವಣೆ : ನಾಳೆ ಮತ ಏಣಿಕೆ – ಮಧ್ಯಾಹ್ನದೊಳಗೆ 180 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Pinterest LinkedIn Tumblr

ಮಂಗಳೂರು, ನವೆಂಬರ್.12: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ಮಂಗಳವಾರ ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್‌ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.. 60 ವಾರ್ಡ್‌ಗಳ 180 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ನ.14 ರಂದು ಫಲಿತಾಂಶ ಹೊರಬೀಳಲಿದೆ. ಮಧ್ಯಾಹ್ನದೊಳಗೆ ಮತಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಮತಯಂತ್ರಗಳನ್ನು ನಗರದ ಸ್ಟೇಟ್‌ ಬ್ಯಾಂಕ್‌ ಸಮೀಪದ ರೊಸಾರಿಯೋ ಹೈಸ್ಕೂಲ್‌ನಲ್ಲಿರುವ ಡಿಮಸ್ಟರಿಂಗ್‌ ಕೇಂದ್ರದ ಸ್ಟ್ರಾಂಗ್‌ರೂಂನಲ್ಲಿಡಲಾಗಿದೆ. ನ.14ರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ
ಪಾಲಿಕೆ ಚುನಾವಣೆಗೆ ಸ್ಫರ್ಧಿಸಿರುವ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲ್ಲಿದೆ. ಮತ ಎಣಿಕೆ ಕಾರ್ಯ ನಡೆಯಲಿರುವ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಶೇ. 59.67 ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿತ್ತು. ಒಟ್ಟು 3,94,894 ಮತದಾರರಲ್ಲಿ 1,13,084 ಪುರುಷರು, ಮತ್ತು 1,22,527 ಮಹಿಳೆಯರು ಸೇರಿ ಒಟ್ಟು 2,35,628 ಮಂದಿ ಮತ ಚಲಾಯಿಸಿದ್ದಾರೆ. ಅಲ್ಲದೆ, 17 ತೃತೀಯ ಲಿಂಗಿಗಳೂ ಮತ ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 3,87,465 ಮತದಾರರಿದ್ದು, ಇದರಲ್ಲಿ 1,99,989 ಪುರುಷರಿದ್ದರೆ, 1,87,465 ಸ್ತ್ರೀಯರಿದ್ದಾರೆ. 63 ತೃತೀಯ ಲಿಂಗಿಗಳಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಸ್ತ್ರೀಯರು ಎರಡನೇ ಸ್ಥಾನದಲ್ಲಿದ್ದರೂ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ವಿಶೇಷ.

Comments are closed.