ಕರ್ನಾಟಕ

ಪೆಲಿಕಾನ್ ಹಕ್ಕಿಗಳ ಸಾವಿಗೆ ಹಕ್ಕಿಜ್ವರವಲ್ಲ, ಜಂತುಹುಳ ಸಮಸ್ಯೆ ಕಾರಣ

Pinterest LinkedIn Tumblr

ಮೈಸೂರು : ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಹಕ್ಕಿಗಳು ಸಾವನ್ನಪ್ಪುವುದು ನಿಲ್ಲುವಂತೆ ತೋರುತ್ತಿಲ್ಲ. ಈಚೆಗಷ್ಟೇ ಕೆರೆಯ ಸಮೀಪ ಒಂದು ಪೆಲಿಕಾನ್ ಸಾವನ್ನಪ್ಪಿತ್ತು. ನಿನ್ನೆ ಸಂಜೆ ಮತ್ತೊಂದು ಪೆಲಿಕಾನ್ ಸಾವನ್ನಪ್ಪಿರುವುದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ. ತಿಂಗಳ ಅಂತರದಲ್ಲಿ ಒಟ್ಟು ನಾಲ್ಕು ಪೆಲಿಕಾನ್ ಗಳು ಜೀವ ಕಳೆದುಕೊಂಡಿವೆ.

ನಿನ್ನೆ ಸಂಜೆ ಕುಕ್ಕರಹಳ್ಳಿ ಕೆರೆಯಲ್ಲಿ ಸ್ಪಾಟ್ ಬಿಲ್ಡ್ ಪೆಲಿಕಾನ್ ಪಕ್ಷಿಯ ಮೃತದೇಹ ತೇಲುತ್ತಿರುವುದು ವಾಯು ವಿಹಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಈ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಲ್ಲಿ ಮೃತಪಟ್ಟ ನಾಲ್ಕನೇ ಪೆಲಿಕಾನ್ ಪಕ್ಷಿ ಇದಾಗಿದೆ. ಆದರೆ ಇನ್ನೂ ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಿನ್ನೆ ಮತ್ತೆ ಒಂದು ಪೆಲಿಕಾನ್ ಸಾವನ್ನಪ್ಪಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಒಂದೆರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದ್ದು, ಈ ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಕಾಡಿದೆ ಹಕ್ಕಿ ಜ್ವರದ ಆತಂಕ
ಕುಕ್ಕರಹಳ್ಳಿ ಕೆರೆಯಲ್ಲಿ ಅಕ್ಟೋಬರ್ 30ರಂದು ಒಂದು ಪೆಲಿಕಾನ್ ಸಾವನ್ನಪ್ಪಿತ್ತು. ಅದಕ್ಕೂ ಮುನ್ನ ಎರಡು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. ಇವುಗಳ ಸಾವಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ದೊರೆತಿದ್ದು, ಪೆಲಿಕಾನ್ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ, ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಡಿಸಿಎಫ್ ಪ್ರಶಾಂತ್ ಕುಮಾರ್‌ ಸ್ಪಷ್ಟಪಡಿಸಿದ್ದರು. ಆದರೆ ಮೇಲಿಂದ ಮೇಲೆ ಪೆಲಿಕಾನ್ ಪಕ್ಷಿಗಳು ಸಾವಿಗೀಡಾಗುತ್ತಿರುವುದಕ್ಕೆ ಹಕ್ಕಿ ಜ್ವರದ ಕಾರಣವಿರಬಹುದು ಎಂಬ ಆತಂಕ ಜನರಲ್ಲಿ ವ್ಯಕ್ತವಾಗಿತ್ತು. ಈಗ ಆ ಆತಂಕ ಇನ್ನೂ ಹೆಚ್ಚಾಗಿದೆ.

ಪಕ್ಷಿಗಳ ಆಶ್ರಯ ತಾಣವಾಗಿರುವ ಕೊಕ್ಕರೆ ಬೆಳ್ಳೂರಿನಲ್ಲಿ ನವೆಂಬರ್ 7ರಂದು ಪೆಲಿಕಾನ್ ಒಂದು ಸಾವನ್ನಪ್ಪಿತ್ತು. ಅದರ ನಂತರ ಮತ್ತೊಂದು ಪೆಲಿಕಾನ್ ಕೂಡ ಅಸ್ವಸ್ಥಗೊಂಡಿತ್ತು. ಹೀಗೆ ಸರಣಿಯಾಗಿ ಅಸ್ವಸ್ಥಗೊಂಡು ಪೆಲಿಕಾನ್ ಗಳು ಸಾವನ್ನಪ್ಪುತ್ತಿರುವುದು ಆತಂಕಕ್ಕೂ ಎಡೆಮಾಡಿಕೊಟ್ಟಿತ್ತು. ಆದರೆ ಇದು ಹಕ್ಕಿಜ್ವರವಲ್ಲ, ಜಂತುಹುಳ ಸಮಸ್ಯೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಕಳೆದ ವರ್ಷವೂ ಕೊಕ್ಕರೆ ಬೆಳ್ಳೂರಿನಲ್ಲಿ ಇದೇ ರೀತಿಯ ಪರಿಸ್ಥಿತಿ ತಲೆದೋರಿ ಜಂತುಹುಳು ಸಮಸ್ಯೆಯಿಂದ ಸುಮಾರು 45ಕ್ಕೂ ಹೆಚ್ಚು ಪಕ್ಷಿಗಳು ಸಾವನಪ್ಪಿದ್ದವು. ಈ ಪಕ್ಷಿಗಳ ಸಾವನ್ನು ನೋಡಿದ ಗ್ರಾಮಸ್ಥರು ಹಕ್ಕಿ ಜ್ವರದ ಆತಂಕ ವ್ಯಕ್ತಪಡಿಸಿ ಕ್ರಮ ವಹಿಸಲು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ರಾಸಾಯನಿಕ ಸಿಂಪಡಿಸಿತು. ಮೃತ ಪೆಲಿಕಾನ್ ‌ಗಳ ದೇಹವನ್ನು ಪ್ರಯೋಗಾಲಯಕ್ಕೂ ಕಳುಹಿಸಿತ್ತು. ಸ್ಥಳಕ್ಕೆ ತಜ್ಞರು ಬಂದು ಪರಿಶೀಲನೆ ನಡೆಸಿ, ಪೆಲಿಕಾನ್ ‌ಗಳು ಹಕ್ಕಿ ಜ್ವರದಿಂದ ಮೃತಪಟ್ಟಿಲ್ಲ, ಜಂತುಹುಳುಗಳಿಂದ ಮೃತಪಟ್ಟಿವೆ ಎಂಬ ಮಾಹಿತಿ ನೀಡಿದ್ದರು. ಜತೆಗೆ ಪೆಲಿಕಾನ್ ತಿಂದು ಉಗುಳಿದ ಮೀನನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಜಂತುಹುಳುಗಳು ಕಂಡು ಬಂದಿದ್ದವು.

ಇದೀಗ ಮತ್ತೆ ಕೆರೆಯಂಗಳಗಳಲ್ಲಿ ಪೆಲಿಕಾನ್ ಪಕ್ಷಿಗಳ ಸರಣಿ ಸಾವು ಸಂಭವಿಸುತ್ತಿರುವುದು ಆತಂಕ ಆವರಿಸುವಂತೆ ಮಾಡಿದೆ.

Comments are closed.