ರಾಷ್ಟ್ರೀಯ

ಜೆಎನ್ ಯು, ಹಾಸ್ಟೇಲ್ ಶುಲ್ಕ ಹೆಚ್ಚದ ಪ್ರಮಾಣವನ್ನು ಕಡಿಮೆ ಮಾಡಲು ವಿವಿ ನಿರ್ಧಾರ

Pinterest LinkedIn Tumblr

ನವದೆಹಲಿ: ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಮಣಿದ ಜೆಎನ್ ಯು, ಹಾಸ್ಟೇಲ್ ಶುಲ್ಕ ಹೆಚ್ಚದ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಲು ನಿರ್ಧರಿಸಿದೆ.

ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಕಳೆದ ಸೋಮವಾರದಿಂದ ವಿದ್ಯಾರ್ಥಿಗಳು ಬೃಹತ್​ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕುಲಪತಿ ಎಂ ಜಗದೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳ ಪ್ರಮಾಣವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶುಲ್ಕ ಹೆಚ್ಚಳದಲ್ಲಿ ಶೇ. 50ರಷ್ಟು ಕಡಿಮೆಗೊಳಿಸಲು ವಿವಿ ಮುಂದಾಗಿದೆ. ಅಲ್ಲದೆ, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಆದರೆ, ಆಡಳಿತ ಮಂಡಳಿ ತೆಗೆದುಕೊಂಡ ಕ್ರಮವು ವಿದ್ಯಾರ್ಥಿ ಸಂಘಟನೆಗೆ ತೃಪ್ತಿ ತಂದಿಲ್ಲ. ಇದು ಬರೀ ಸುಳ್ಳು, ನಮ್ಮ ದಾರಿ ತಪ್ಪಿಸುವ ಚಿತಾವಣೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸಲು ನಿರ್ಧರಿಸಿದ್ದಾರೆ.

ಜೆಎನ್​ಯುನ ಹಾಸ್ಟೆಲ್​ನಲ್ಲಿ ಡಬಲ್ ಸೀಟರ್ ರೂಮಿಗೆ ತಿಂಗಳ ಕೇವಲ 10 ರೂ ಇದ್ದ ಶುಲ್ಕವನ್ನು 200 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಸಿಂಗಲ್ ಸೀಟರ್ ರೂಮಿನ ಶುಲ್ಕವನ್ನು 20 ರೂನಿಂದ 600 ರೂಪಾಯಿಗೆ ಏರಿಸಲಾಗಿತ್ತು.

ಕಳೆದ ಸೋಮವಾರ ಜೆಎನ್ ಯು ವಿದ್ಯಾರ್ಥಿ ಸಂಘದ ನೂರಾರು ಕಾರ್ಯಕರ್ತರು ವಿವಿ ಎದುರಿಗಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ವಿವಿ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದಾಗಿ ಈ ಪ್ರದೇಶದಲ್ಲಿನ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

Comments are closed.