ಕರಾವಳಿ

ಟಿಕೆಟ್ ಹಂಚಿಕೆ ವಿವಾದ :ದ.ಕ. ಜಿಲ್ಲಾ ಕಾಂಗ್ರೆಸ್‌ನಲ್ಲಿ‌ ಭಿನ್ನಮತ ಸ್ಪೋಟ – ಮೊಯ್ದಿನ್ ಬಾವ ಮೇಲೆ ಹಲ್ಲೆ – ವೇದವ್ಯಾಸ್ ಪರ ಘೋಷಣೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.31: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಮಾಜಿ ಮೇಯರ್‌ ಗುಲ್ಝಾರ್ ಬಾನು ಹಾಗೂ ಶಾಸಕ ಮೊಯ್ದಿನ್ ಬಾವ ಅವರ ಬೆಂಬಲಿಗರ ನಡುವೆ ಹೊಯ್ ಕೈ ನಡೆದಿದೆ.

ಬುಧವಾರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ನಡೆದ ಬೆನ್ನಿಗೆ ಆಕಾಂಕ್ಷಿ ಅಭ್ಯರ್ಥಿಗಳು ಗಲಾಟೆ ನಡೆಸಿದ್ದಾರೆ. ಮೊದಲಿಗೆ ದ.ಕ.ಜಿಲ್ಲಾ ಕಾಂಗ್ರೆಸ್‌ ಕಚೇರಿ ಹೊರಭಾಗದಲ್ಲಿ ಟಿಕೆಟ್‌ ವಂಚಿತರ ಬೆಂಬಲಿಗರು ನಾಯಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಬಳಿಕ ಮಾಧ್ಯಮದವರಿಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಹೆಸರು ಬಿಡುಗಡೆಗೊಳಿಸಲು ನಗರದ ಖಾಸಗಿ ಹೊಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿ ಸಂದರ್ಭ ಹೊಟೇಲ್ ಹೊರ ಆವರಣದಲ್ಲಿ ಸೇರಿದ್ದ ಕೆಲವರು ನಾಯಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದ ಮಾಜಿ ಶಾಸಕ ಬಿ.ಎ. ಮೊದಿನ್‌ ಬಾವಾ ಅವರ ಮೇಲೆ ಮಾಜಿ ಮೇಯರ್‌ ಗುಲ್ಜಾರ್‌ಬಾನು ಅವರ ಸಂಬಂಧಿಕರು ಎನ್ನಲಾದ ಕೆಲವರು ಹಲ್ಲೆ ನಡೆಸಿದ್ದಾರೆ.

ನಗರದ ಕೊಡಿಯಾಲ್‌ಬೈಲ್‌ನ ಹೊಟೇಲ್‌ ಒಂದರ ಸಭಾಂಗಣದಲ್ಲಿ ಬುಧವಾರ ರಾತ್ರಿ ಕೆಪಿಸಿಸಿ ನಾಯಕರು ಪತ್ರಕರ್ತರಿಗೆ ಹೆಸರು ಘೋಷಣೆ ಮಾಡಿದ್ದು, ಇದರಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಮೊಯಿದಿನ್‌ ಬಾವಾ ಹೊರಗೆ ಬರುತ್ತಿದ್ದಂತೆ ಮಾಜಿ ಮೇಯರ್‌ ಗುಲ್ಜಾರ್‌ಬಾನು ಅವರ ಸಂಬಂಧಿಕರು ಮತ್ತು ಬೆಂಬಲಿಗರು ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಫಾತಿಮಾ ಬಿ. ಎಂಬವರಿಗೆ ಟಿಕೆಟ್‌ ನೀಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.

ಇದೇ ವೇಳೆ ಮೊಯಿದಿನ್‌ ಬಾವಾ ಅವರ ಬೆಂಬಲಿಗರು ಹಾಗೂ ಗುಲ್ಜಾರ್‌ಬಾನು ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.ಇದೇ ವೇಳೆ ಮಾಜಿ ಮೇಯರ್ ಗುಲ್ಜಾರ್ ಬಾನು ಬೆಂಬಲಿಗರಿಂದ ಮಾಜಿ ಶಾಸಕ ಮೊಯ್ದಿನ್ ಬಾವ ಗೆ ಹಲ್ಲೆ ನಡೆಯಿತು.

ಈ ವೇಳೆ ಅಸಮಾಧಾನಗೊಂಡ ಕಾರ್ಯಕರ್ತರು ಮಾಜಿ ಶಾಸಕರಾದ ಮೊಯಿದಿನ್‌ ಬಾವಾ ಹಾಗೂ ಜೆ.ಆರ್ ಲೋಬೋ ವಿರುದ್ಧ ಘೋಷಣೆ ಕೂಗಿದರು. ಮಾತ್ರವಲ್ಲದೇ ಕಾಂಗ್ರೆಸ್ ಗೆ ಜೈಕಾರ, ಮಾಜಿ ಶಾಸಕ ಜೆ ಆರ್ ಲೋಬೋ ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಹಾಲಿ ಶಾಸಕ ವೇದವ್ಯಾಸ ಕಾಮತ್ ಅವರೇ ಮತ್ತೆ 30 ವರ್ಷ ಶಾಸಕರಾಗಿರುತ್ತಾರೆ ಎಂದು ಬೊಬ್ಬೆ ಹಾಕಿದರು.

ಸುರತ್ಕಲ್ ವಾರ್ಡ್ ನಲ್ಲಿ ಈ ‌ಹಿಂದೆ ಸೋತಿದ್ದ ಗುಲ್ಝಾರ್ ಬಾನು ಅವರಿಗೆ ಮತ್ತೆ ಟಿಕೆಟ್ ನೀಡೋದಾಗಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಇದೀಗ ಟಿಕೆಟ್ ನೀಡದ್ದಕ್ಕೆ ಗುಲ್ಝಾರ್ ಬಾನು ಪುತ್ರ ಹಾಗೂ ಮೊಯಿದ್ದೀನ್ ಬಾವ ನಡುವೆ ಹೊಯ್ ಕೈ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಗುಲ್ಝಾರ್ ಬಾನು ಅವರಿಗೆ ಟಿಕೆಟ್ ತಪ್ಪಿಸಲು ಜೆ.ಆರ್.ಲೋಬೋ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ಕೂಡ ಧಿಕ್ಕಾರ ಕೂಗಿದರು.

Comments are closed.