ಕರಾವಳಿ

ಭಾರೀ ಮಳೆ ಸಂಭವ : ದ.ಕ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 25 : ಅರಬ್ಬೀ ಸಮದ್ರ ಹಾಗೂ ಲಕ್ಷ ದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವದಿಂದ ದಿನಾಂಕ 23/10/2019 ರ ರಾತ್ರಿಯಿಂದ ದ.ಕ.ಜಿಲ್ಲೆ ಸೇರಿದಂತೆ ಮಂಗಳೂರು ನಗರದಲ್ಲಿ ತೀವ್ರ ಗತಿಯಲ್ಲಿ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಾಳೆಯು (26/10/19) ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಘೋಷಿಸಿದೆ.

ಆಲದೇ ರಾಜ್ಯದ ಕರಾವಳಿ ಭಾಗಕ್ಕೆ ಕ್ಯಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಟೋಬರ್ 26 ಶನಿವಾರದಂದು ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಮುನ್ನಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಅಂಗನವಾಡಿ ಕೇಂದ್ರದಿಂದ ಪಿಯುಸಿ ತನಕದ ಎಲ್ಲಾ ಖಾಸಗಿ, ಸರಕಾರಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಇನ್ನು ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ನೀರು ನಿಲ್ಲುವ ಹಾಗೂ ತಗ್ಗು ಪ್ರದೇಶಗಳಲ್ಲಿ ತೆರಳುವ ಸಂದರ್ಭ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ. ಮಕ್ಕಳನ್ನು ತಗ್ಗು ಪ್ರದೇಶ, ನೀರು ನಿಂತಿರುವ ಪ್ರದೇಶ, ನದಿ, ಹಳ್ಳಗಳತ್ತ ತೆರಳಲು ಅವಕಾಶ ನೀಡದೆ ಎಚ್ಚರಿಕೆ ವಹಿಸುವಂತೆ ಅವರು ಪೋಷಕರಿಗೆ ಸೂಚನೆ ನೀಡಿದ್ದಾರೆ.

Comments are closed.