ಕರಾವಳಿ

ನ. 12ರಂದು ಮನಪಾ ಚುನಾವಣೆ :ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

Pinterest LinkedIn Tumblr

ಮಂಗಳೂರು, ಆಕ್ಟೋಬರ್.24: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭಗೊಂಡಿದೆ. ಅ.31ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರು, ನ. 12ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನದ ನಡೆಯಲಿದೆ. ನಾಮಪತ್ರ ಪರಿಶೀಲನೆಗೆ ನ.2 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ನ.4 ಕೊನೆಯ ದಿನ. ನ.14ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು ಮನಪಾ ವ್ಯಾಪ್ತಿಯಲ್ಲಿ ನ.14ರವರೆಗೆ ಜಾರಿಯಲ್ಲಿರುತ್ತದೆ. ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯವು ಪಾಂಡೇಶ್ವರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದರು.

ಚುನಾವಣೆಯಲ್ಲಿ ನೋಟಾ ಚಲಾವಣೆಗೆ ಅವಕಾಶವಿದೆ. ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನು ಮುದ್ರಿಸಲಾಗುವುದು. ಚುನಾವಣೆಗೆ ಸ್ಪಧಿಸುವ ಅಭ್ಯರ್ಥಿಗಳು ತಲಾ 3 ಲಕ್ಷ ರೂ. ಚುನಾವಣಾ ವೆಚ್ಚ ಮಾಡಬಹುದು. ವೆಚ್ಚದ ಬಗ್ಗೆ ನಿಗಾ ವಹಿಸುವ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಭದ್ರತೆ ದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಯುಕ್ತ ಶಾನಾಡಿ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.

Comments are closed.