ಕರಾವಳಿ

ದುಬೈನಲ್ಲಿ ಚಿರಂತನದ ವಿಶ್ವ ಸಂಸ್ಕೃತಿ ಉತ್ಸವ – ಮನಸೆಳೆದ ಸಂಗೀತ ನೃತ್ಯೋತ್ಸವ : ಹರೀಶ್ ಶೆರಿಗಾರ್‌ ಸಹಿತಾ 7ಮಂದಿಗೆ ಇಂಟರ್‌ನ್ಯಾಷನಲ್ ಎಕ್ಸೆಲೆನ್ಸ್ ಅವಾರ್ಡ್

Pinterest LinkedIn Tumblr

ದುಬೈ : ಅಕ್ಟೋಬರ್ 11 ರಂದು ದುಬೈನ ಕ್ರೆಡೆನ್ಸ್ ಸಭಾಂಗಣದಲ್ಲಿ ನಡೆದ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿಯೇ ಇತ್ತು. ಕರ್ನಾಟಕದ 70ಕ್ಕೂ ಹೆಚ್ಚು ಕಲಾವಿದರಿಂದ ವೈವಿಧ್ಯಮಯ ನೃತ್ಯಗಳ ಸುರಿಮಳೆಯಲ್ಲಿ ಮಿಂದ ಪ್ರೇಕ್ಷಕರ ಹರ್ಷೋದ್ಗಾರ,  ಕರತಾಡನ ಕ್ರೆಡೆನ್ಸ್ ಸಭಾಂಗಣದಲ್ಲೆಲ್ಲಾ ತುಂಬಿತ್ತು. ದಾವಣಗೆರೆಯ ಚಿರಂತನ ತಂಡ, ಮೈಸೂರಿನ ಶ್ರೀಧರ್ ಜೈನ್ ತಂಡ, ಗುರು ಕೃಪಾ ಫಡಕೆ ತಂಡ, ಬೆಂಗಳೂರಿನ ಗುರು ಕಾಮಾಕ್ಷಿ ತಂಡ, ಸೃಜನಾ ಆರ್ಟ್ ಅಕಾಡೆಮಿ ತಂಡ ಹಾಗೂ ಡಾ||ಲತಾಶೇಖರ್ತಂ ಡಗಳಿಂದ ಕಂಸಾಳೆ, ಕಥಕ್, ಜಾನಪದ, ಕಾಂಟೆಂಪರರಿ ಮತ್ತು ವಿಶೇಷ ಯೋಗ ನೃತ್ಯ ಪ್ರಸ್ತುತಿಗಳು ನಡೆದವು.

ಈ ವಿಶ್ವ ಸಂಸ್ಕೃತಿ ಉತ್ಸವದ ಅದ್ದೂರಿ ವೇದಿಕೆಯಲ್ಲಿ ದುಬೈನ ಗಣ್ಯರು ಹಾಗೂ ಭಾರತದಿಂದ ಬಂದಿದ್ದ ವಿಶೇಷ ಅತಿಥಿಗಳು ಕಂಗೊಳಿಸುತ್ತಿದ್ದರು. ಡಾ|| ಬಿ.ಆರ್. ಶೆಟ್ಟಿಯವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಕಳೆ ಕೊಟ್ಟಿತು. ಡಾ|| ಶೀಲಾ ಶ್ರೀಧರ್, ಶ್ರೀ ಯಶವಂತ ಸರದೇಶಪಾಂಡೆ ಭಾರತದಿಂದ ಹಾಗೂ ಶ್ರೀ ಹರೀಶ್ ಶೆರಿಗಾರ್, ಶ್ರೀ ಮಹಮ್ಮದ್ ಮುಸ್ತಫಾ, ಶ್ರೀ ಜಫರುಲ್ಲಾ ಖಾನ್, ಶ್ರೀ ಯೂಸುಫ್ ಅಲ್ ಬ್ಲೂಷಿ ಹಾಗೂ ಶ್ರೀ ಮಲ್ಲಿಕಾರ್ಜುನ ಗೌಡ ದುಬೈನಿಂದ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 7 ಜನರಿಗೆ ಇಂಟರ್‌ನ್ಯಾಷನಲ್ ಎಕ್ಸೆಲೆನ್ಸ್ ಅವಾರ್ಡ್ (ಪ್ರಶಸ್ತಿ) ಕೊಟ್ಟು
ಸನ್ಮಾನಿಸಲಾಯಿತು.

ಸಾಗರದಾಚೆಯ ಕನ್ನಡ ಸೇವೆಗಾಗಿ ಶ್ರೀ ಮಹಮ್ಮದ್ ಮುಸ್ತಫಾರವರಿಗೆ, ಕನ್ನಡ ಪರ ಸಂಘಟನೆ, ಸಮಾಜ ಸೇವೆ ಹಾಗೂ ಚಲನ ಚಿತ್ರ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ದುಬೈಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೆರಿಗಾರ್‌ರವರಿಗೆ, ಸುಮಾರು  2 ಲಕ್ಷ ಗಿಡ ನೆಟ್ಟು ಸೋಮನಹಳ್ಳಿ ಕೆರೆಯ ಪುನರುಜ್ಜೀವನ ಮಾಡಿದ್ದಕ್ಕಾಗಿ ಶ್ರೀಮತಿ ರೇವತಿ ಕಾಮತ್‌ರವರಿಗೆ, ಭರತನಾಟ್ಯ ಕ್ಷೆತ್ರದ ಸಾಧನೆಗಾಗಿ ಗುರು ಸೀತಾ ಗುರುಪ್ರಸಾದ್‌ರವರಿಗೆ, ಯೋಗ ಕ್ಷೇತ್ರದಲ್ಲಿ ಡಾ| ಲತಾ ಶೇಖರ್ ರವರಿಗೆ,ಉದ್ಯೋಗ ಕ್ಷೇತ್ರದಲ್ಲಿ ಶ್ರೀ ಶ್ರೀನಿವಾಸಮೂರ್ತಿರವರಿಗೆ ಹಾಗೂ ನೃತ್ಯ ಮತ್ತು ಸಮಾಜ ಸೇವೆಗಾಗಿ ಗುರು ಶ್ರೀಧರ್ ಜೈನ್‌ರವರಿಗೆ ಈ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಂತರ ಮಾತಾಡಿದ ಶ್ರೀ ಬಿ.ಆರ್. ಶೆಟ್ಟಿಯವರು ಚಿರಂತನ ದ ಈ ಪ್ರಯತ್ನವನ್ನು ಶ್ಲಾಘಿಸಿದರು, ಕಾರ್ಯಕ್ರಮದ ಹಿಂದಿನ ಜವಾಬ್ದಾರಿ ಯನ್ನು ಹೊತ್ತ ಎಲ್ಲರನ್ನೂ ಪ್ರಶಂಶಿಸಿದರು. ಇಡೀ ಕಾರ್ಯಕ್ರಮದ ರೂವಾರಿ ಶ್ರೀಮತಿ ದೀಪಾ ರ ಅಚ್ಚುಕಟ್ಟಾದ ಕೆಲಸಕ್ಕೆ ತಮ್ಮ ಅಭಿನಂದನೆ -ಗಳನ್ನು ತಿಳಿಸಿದರು.

ದುಬೈನಲ್ಲಿ ಇಂತಹ ಅದ್ದೂರಿ ಹಾಗೂ ಗುಣಮಟ್ಟದ ಕಾರ್ಯಕ್ರಮ 70 ಕ್ಕೂ ಹೆಚ್ಚು ಕಲಾವಿದರಿಂದ ನಡೆದಿಲ್ಲವೆಂದೂ ಹಾಗೂ ಅತ್ಯುತ್ತಮ ಕಾರ್ಯಕ್ರಮಗಳಲ್ಲೊಂದು ಎಂದು ತಿಳಿಸಿದರು. ನಂತರ ಮಾತನಾಡಿದ ಶ್ರೀ ಜಫರುಲ್ಲಾ ಖಾನ್ ದುಬೈನಲ್ಲಿ ಕನ್ನಡ ಪರ ಕೆಲಸ ಆಗಬೇಕೆಂದು ತಿಳಿಸುತ್ತಾ ಚಿರಂತನ ದ ಈ ಪ್ರಯತ್ನಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಶ್ರೀಧರ್‌ಜೈನ್ ತಂಡದ ವಂದೇ ಮಾತರಂ, ಲೋಕದ ಕಾಳಜಿ, ಚೆಲ್ಲಿದರು ಮಲ್ಲಿಗೆಯ ರಂಗೀಲೋ ಮಾರೋ ನೃತ್ಯಗಳಲ್ಲಿ ಒಂದಕ್ಕಿಂತ ಒಂದರಲ್ಲಿ ವೈವಿಧ್ಯತೆ ಕಾಣಿಸಿ, ತಂಡದ ಹುಮ್ಮಸ್ಸಿಗೆ ತಕ್ಕಂತೆ ಪ್ರೇಕ್ಷಕರ ಚಪ್ಪಳೆಯ ಸುರಿಮಳೆಯೇ ಅಯಿತು. ನೃತ್ಯ ಸಿರಿ ತಂಡ  ಕಂಸಾಳೆ ಅಪ್ಪಟ ದೇಶಿ ಶೈಲಿಯಲ್ಲಿ ಮೂಡಿ ಬಂದು ಪ್ರೇಕ್ಷಕರ ಮನ ಸೆಳೆಯಿತು.

ನೃತದೇಗುಲ ತಂಡದ ದಶಾವತಾರ, ಚಿರಂತನ ತಂಡದ ದೀಪವು ನಿನ್ನದೆ ಹಾಗೂ ಬಾರಿಸು ಕನ್ನಡ ಡಿಂಡಿಮವ ನೃತ್ಯಗಳಲ್ಲಿ ಕಲಾವಿದೆಯರು ಪ್ರೇಕ್ಷಕರನ್ನು ಹಿಡಿದಿಟ್ಟರು, ವಿಶೇಷವಾದ ಯೋಗ ನೃತ್ಯದ ಮುಖಾಂತರ ಯೋಗಾಸನದ ವಿವಿಧ ಭಂಗಿಗಗಳನ್ನು ಮನಮೋಹಕವಾಗಿ ಡಾ|| ಲತಾ ಶೇಖರ್ ತಂಡ ಪ್ರಸ್ತುತಪಡಿಸಿದಿರು.

ಕಾರ್‍ಯಕ್ರಮಕ್ಕೆ ಮೊದಲು ಸಮ್ಮಿತಾ ಎಸ್. ಮುತಾಲಿಕ್ ಸುಶ್ರಾವ್ಯವಾಗಿ ಹಾಡಿದರೆ ಕಾರ್‍ಯಕ್ರಮದ ಮಧ್ಯದಲ್ಲಿ ಶ್ರೀ ಹರೀಶ್ ಶೆರಿಗಾರ್ ರಾಜ್‌ಕುಮಾರ್ ರವರ ಹಾಡನ್ನು ಹಾಡಿದಾಗ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

ಒಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಕಲಾವಿದರಿಂದ ವೈವಿಧ್ಯಮಯ ನೃತ್ಯಗಳನ್ನು ನಡೆಸಿ, ಕನ್ನಡದ ಕಂಪನ್ನು, ಸಾಂಸ್ಕೃತಿಕ ವೈಭವವನ್ನೂ ದುಬೈನಲ್ಲಿ ಪಸರಿಸುವಲ್ಲಿ ಚಿರಂತನ ಯಶಸ್ವಿಯಾಯಿತು. ದುಬೈನ ಕನ್ನಡ ಪರ ಸಂಘಟನೆಗಳು ಈ ಕಾರ್‍ಯಕ್ರಮಕ್ಕೆ ಸಾಥ್ ನೀಡಿದ್ದವು.

ಕರ್ನಾಟಕ ಸಂಘ, ಶಾರ್ಜಾ, ಅಬುದಾಬಿ ಕರ್ನಾಟಕ ಸಂಘ, ಕನ್ನಡ ಸಂಘ ಅಲ್‌ಐನ್ ಹಾಗೂ ಕನ್ನಡಿಗರು ದುಬೈನೊಂದಿಗೆ ಚಿರಂತನ ಕೈ ಜೋಡಿಸಿದ್ದು ಇಡೀ ಯು.ಎ.ಇ. ಯಿಂದ ಪ್ರೇಕ್ಷಕರು ಬರಲು ಅನುಕೂಲವಾಯಿತು.ಫೇಸ್‌ಬುಕ್ ನಲ್ಲಿಯೂ 12,000 ಕ್ಕೂ ಹೆಚ್ಚು ಪ್ರೇಕ್ಷಕರು ಕಾರ್‍ಯಕ್ರಮವನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಮೇರು ಕಲಾವಿದರು, ಸಾಹಿತಿಗಳು, ಗಣ್ಯರನ್ನು ಒಂದೇ ವೇದಿಕೆಯಲ್ಲಿ ನೋಡಿ, ಉತ್ತಮ ಗುಣಮಟ್ಟದ ನೃತ್ಯಗಳನ್ನು ಸವಿಯುವ ಅವಕಾಶವನ್ನು ದುಬೈ ಕನ್ನಡಗರಿಗೆ ವಿಶ್ವ ಸಂಸ್ಕೃತಿ ಉತ್ಸವ ದಲ್ಲಿ ಚಿರಂತನ ನೀಡಿತು.

ಚಿರಂತನದ ದೀಪಾ ಎನ್. ರಾವ್ ರ ನೇತೃತ್ವದಲ್ಲಿ ನಡೆದ ಈ ಕಾರ್‍ಯಕ್ರಮಕ್ಕೆ ದುಬೈನಿಂದ ಶ್ರೀ ಎಂ.ಎಸ್. ಅರುಣ್, ಶ್ರೀ ನೋಯೆಲ್ ಅಲ್‌ಮೆದಾ, ಶ್ರೀ ಪ್ರಶಾಂತ್, ಶ್ರೀ ಸುಂದರೇಶ, ಶ್ರೀ ಸದನದಾಸ್ ಹಾಗೂ ಚಿರಂತನ ವತಿಯಿಂದ ಶ್ರೀ ಮಾಧವ ಪದಕಿ ಹಾಗೂ ಶ್ರೀಮತಿ ಅಲಕನಂದ ಎಂ.ಎಸ್. ಸಹಕಾರ ನೀಡಿದರು.

Comments are closed.