ಮುಂಬೈ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – 142 ಕೋಟಿ ರು ನಗದು , 975 ಶಸ್ತ್ರಾಸ್ತ್ರ ವಶ

Pinterest LinkedIn Tumblr

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಹಿರಂಗ ಪ್ರಚಾರ ಕಾರ್ಯಕ್ಕೆ ತೆರೆ ಬಿದ್ದಿದ್ದು, ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.

ಚುನಾವಣಾ ಪ್ರಚಾರ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅಭ್ಯರ್ಥಿಗಳು, ಪಕ್ಷಗಳಿಂದ ಸಂಗ್ರಹವಾದ ನಗದು ಮೊತ್ತ ಹಾಗೂ ಶಸ್ತ್ರಾಸ್ತ್ರಗಳ ವಿವರಗಳನ್ನು ನೀಡಿದೆ.

‘ಸುಮಾರು 142 ಕೋಟಿ ರು ನಗದು ಹಾಗೂ 975 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ದಿಲೀಪ್ ಶಿಂಧೆ ಹೇಳಿದ್ದಾರೆ. ಇದಲ್ಲದೆ ಆದಾಯ ಇಲಾಖೆ ಕೂಡಾ ಇತ್ತೀಚೆಗೆ ಮುಂಬೈನಲ್ಲಿ ನಡೆಸಿದ ದಾಳಿ ವೇಳೆ 29 ಕೋಟಿ ರು ಅಕ್ರಮ ನಗದು ಪತ್ತೆಯಾಗಿದೆ. ಆದರೆ ಇದು ಯಾರಿಗೆ ಸೇರಿದ ಹಣ ಹಾಗೂ ಇನ್ನಿತರ ವಿವರಗಳನ್ನು ಐಟಿ ಇಲಾಖೆ ಹಂಚಿಕೊಂಡಿಲ್ಲ.

ಮತದಾರರನ್ನು ಸೆಳೆಯಲು ನಗದು ಇನ್ನಿತರ ಗಿಫ್ಟ್ ನೀಡುವುದರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಮುಂಬೈನ 36 ವಿಧಾನಸಭಾ ಕ್ಷೇತ್ರಗಳಲ್ಲಿ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುವ ತಂಡಗಳನ್ನು ರೂಪಿಸಲಾಗಿದೆ ಎಂದು ದಿಲಿಪ್ ಶಿಂಧೆ ಹೇಳಿದರು.

ಮಹಾರಾಷ್ಟ್ರದಲ್ಲಿ ಮೈತ್ರಿ ಸಾಧಿಸಿರುವ ಬಿಜೆಪಿ ಹಾಗೂ ಶಿವಸೇನಾಕ್ಕೆ ಚುನಾವಣಾ ಪೂರ್ವ ಸಮೀಕ್ಷೆಯಿಂದ ಮತ್ತೊಮ್ಮೆ ಶುಭ ಸುದ್ದಿ ಸಿಕ್ಕಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ್ದ ಸಮೀಕ್ಷೆಯಿಂದ ಉತ್ತಮ ಫಲಿತಾಂಶ ಇಂದು ಪ್ರಕಟವಾದ ಫಲಿತಾಂಶದಲ್ಲಿ ಸಿಕ್ಕಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್‌ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿವೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 145 ಮ್ಯಾಜಿಕ್ ನಂಬರ್ ದಾಟುವ ಪಕ್ಷ ಅಧಿಕಾರ ಸ್ಥಾಪಿಸುವ ಅರ್ಹತೆ ಹೊಂದಲಿದೆ.

Comments are closed.