ಕರಾವಳಿ

ದಸರಾ ವೇಷ : ಕೊರಗ ಜನಾಂಗದವರ ಅವಹೇಳನ ಮಾಡಿದರೆ ಜೈಲು ಶಿಕ್ಷೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 02 : ಸರಕಾರದ ಸುತ್ತೋಲೆಯ ಆದೇಶದಂತೆ ದಸರಾ ಆಚರಣೆಯ ಸಮಯದಲ್ಲಿ ಕೊರಗ ಜನಾಂಗದವರ ಅವಹೇಳನ ಮಾಡಿದರೆ ಜೈಲು ಶಿಕ್ಷೆ ಮತ್ತು ರೂ.5000/ ದಂಡ ವಿಧಿಸಲಾಗುವುದು ಎಂದು ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

(ಸಾಂದರ್ಭಿಕ ಚಿತ್ರ)

ದಸರಾ ಆಚರಣೆಯ ಸಮಯದಲ್ಲಿ ಬೇರೆ ಜಾತಿಯ ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡುವುದು, ಅಮವಾಸ್ಯೆ ದಿನಗಳಲ್ಲಿ ಕೊರಗ ಜನಾಂಗದವರ ಹೆಂಗಸರಿಗೆ ಉಗುರು ತಲೆಕೂದಲುಗಳನ್ನು ಊಟದಲ್ಲಿ ಹಾಕಿ ಉಣಲು ನೀಡುವುದು, ಬೇರೆ ಜನಾಂಗದವರ ಚಿಕ್ಕ ಮಕ್ಕಳಿಗೆ ಕಾಯಿಲೆ ಇದ್ದಾಗ ಕೊರಗ ಜನಾಂಗದ ಮಹಿಳೆಯನ್ನು ಕರೆದು ಆ ಮಗುವಿಗೆ ಹಾಲು ಉಣಿಸಲು ಬಳಸಿಕೊಂಡು ಮಗುವಿನ ಕಾಯಿಲೆಯನ್ನು ಕೊರಗ ಜನಾಂಗದವರಿಗೆ ಹರಡುವಂತೆ ಮಾಡುವುದು, ಕಂಬಳದ ಕೆರೆಯಲ್ಲಿ ಕುಪ್ಪಿಚೂರು, ಮುಳ್ಳು ಮುಂತಾದವುಗಳು ಇರುವ ಬಗ್ಗೆ ಕಂಬಳದ ಹಿಂದಿನ ದಿನ ಕಂಬಳದ ಕೆರೆಯಲ್ಲಿ ಕೊರಗ ಜನಾಂಗದವರನ್ನು ಬಳಸಿಕೊಳ್ಮ್ಳವುದು ಜಾತ್ರೆ, ಕಂಬಳ ಮತ್ತು ಇನ್ನಿತರ ಸಾರ್ವಜನಿಕ ಸಮಾರಂಭಗಳಲ್ಲಿ ಕೊರಗ ಜನಾಂಗದವರನ್ನು ಡೋಲು ಬಡಿಸಿ ಕುಣಿತಕ್ಕೆ ಬಳಸಿಕೊಳ್ಳುವುದು ಮತ್ತು ಬೇರೆ ಜನಾಂಗದವರ ಹೆಂಗಸರಿಗೆ ಸೀಮಂತದ ದಿನ ಹೆಂಗಸಿನ ಸೀಮಂತದ ಎಂಜಲು ಊಟವನ್ನು ಕೊರಗ ಜನಾಂಗದ ಮಹಿಳೆಯನ್ನು ಕರೆದು ಎಂಜಲು ಊಟ ಮಾಡಿ ಸೀಮಂತಳ ಮೇಲಿರುವ ದೃಷ್ಟಿಯನ್ನು ತೆಗೆಯಲು ಬಳಸಿಕೊಳ್ಳುವುದು ಮತ್ತಿತರ ಚಟುವಟಿಕೆಗಳು ಕೊರಗರ ಅಜಲು ಪದ್ದತಿ ನಿಷೇಧ ಕಾಯ್ದೆಯಡಿ ಬರುವುದರಿಂದ ಇಂತಹ ಆಚರಣೆಗಳು ಕಂಡು ಬಂದಲ್ಲಿ ಅಂತಹ ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ನಿಷೇಧ ಅಧಿನಿಯಮ 1989ರ ಅಡಿಯಲ್ಲಿ ನೊಂದಾಯಿಸಿ ಕಾನೂನು ಕ್ರಮ ಜರುಗಿಸಲಾಗುವುದು.

ಅಲ್ಲದೆ 5 ರಿಂದ 6 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.5000/ ದಂಡ ವಿಧಿಸಲಾಗುವುದು. ಆದ ಕಾರಣ ಮುಂಬರುವ ದಸರಾ ಹಬ್ಬಗಳ ಸಮಯದಲ್ಲಿ ಇಂತಹ ಪ್ರಸಂಗಗಳು ಕಂಡು ಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.