ಕರಾವಳಿ

ಪತ್ರಿಕೋದ್ಯಮದಲ್ಲಿ ಸತ್ಯ ಮತ್ತು ನಿಷ್ಠೆ ಅತ್ಯಗತ್ಯ : ಬಿ.ರವೀಂದ್ರ ಶೆಟ್ಟಿ

Pinterest LinkedIn Tumblr

ಮಂಗಳೂರು : ಪತ್ರಿಕೋದ್ಯಮದಲ್ಲಿ ಸತ್ಯ ಮತ್ತು ನಿಷ್ಠೆ ಅತೀ ಮುಖ್ಯ ಸತ್ಯಾಂಶವನ್ನು ಜನರಿಗೆ ತಿಳಿಸಲು ಮಾಧ್ಯಮಗಳು ಪೂರಕ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪತ್ರಿಕಾ ಭವನದ ಮಾಜಿ ಅಧ್ಯಕ್ಷ, ವಿಜಯ ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕ ಬಿ.ರವೀಂದ್ರ ಶೆಟ್ಟಿ ಹೇಳಿದರು.

ಮಂಗಳೂರು ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ‘ಕನ್ನಡ ಪತ್ರಿಕೋದ್ಯಮ’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಪ್ರಸ್ತುತ ವಿದ್ಯಮಾನಗಳನ್ನು ಸರಳ ಭಾಷಾ ಶೈಲಿಯಲ್ಲಿ ಜನರಿಗೆ ತಿಳಿಸಲು ಮಾಧ್ಯಮಗಳು ಸಹಕಾರಿಯಾಗಿದ್ದು, ಮುಖ್ಯವಾಗಿ ಮಾಧ್ಯಮಗಳ ಬೆಳವಣಿಗೆ ಜನರ ಮೂಲಕವೇ ನಡೆಯುತ್ತದೆ. ಪ್ರಜಾಪ್ರಭುತ್ವದ ಉಳಿಯುವಿಕೆಗೆ ಮಾಧ್ಯಮಗಳು ಅತ್ಯಗತ್ಯವಾಗಿದ್ದು ಮೂಲಭೂತ ಹಕ್ಕುಗಳ ಸಂರಕ್ಷಣೆಗೂ ಪೂರಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್ ಸಿ, ಸ್ವತಃ ಆಸಕ್ತಿ ಮತ್ತು ಪರಿಶ್ರಮದಿಂದ ಪತ್ರಿಕಾರಂಗದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಸಿಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ. ಪ್ರಕಾಶಚಂದ್ರ ಬಿ, ಕನ್ನಡ ಉಪನ್ಯಾಸಕಿ ಡಾ.ನಾಗವೇಣಿ ಎನ್, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಂಚಾಲಕಿ ಡಾ. ಜಯಶ್ರೀ ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ಡಾ. ನಾಗವೇಣಿ ಎನ್ ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗ ಸಂಚಾಲಕಿ ಡಾ. ಜಯಶ್ರೀ ಬಿ ವಂದಿಸಿ, ದ್ವಿತೀಯ ಪತ್ರಕೋದ್ಯಮ ವಿದ್ಯಾರ್ಥಿನಿ ತೇಜಸ್ವಿನಿ. ಕೆ ಕಾರ್ಯಕ್ರಮ ನಿರೂಪಿಸಿದರು.

Comments are closed.