ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ರು ಜೀವನಶೈಲಿ ಬದಲಾಯಿಸಿಕೊಳ್ಳಲಿ ಎಂದ ಶ್ರೀರಾಮುಲುಗೆ ಹಾಲಾಡಿ ಕೊಟ್ಟ ಟಾಂಗ್ ಏನು?

Pinterest LinkedIn Tumblr

ಕುಂದಾಪುರ: ಯಾವುದೇ ಫಲಾಪೇಕ್ಷೆಯಿಲ್ಲದ ಸದಾ ಜನರ ಸೇವೆಯಲ್ಲಿ ಸಂತೃಪ್ತಿ ಪಡೆಯುವ ವಿಶಾಲ ಮನೋಭಾವದ ಹಾಲಾಡಿ ಶ್ರೀನಿವಾಸ ಶೆಟ್ಟರು ಜನರ ನಡುವೆ ಇರಬೇಕು ಎಂದು ಬಯಸುತ್ತಾರೆ. ಹೆಚ್ಚು ಮಾತನಾಡದ ಹಾಲಾಡಿಯವರು ಖಂಡಿತಾ ಮಂತ್ರಿಗಳಾಗುತ್ತಾರೆ. ಆದರೆ ಹಿಂದೆ ಉಳಿಯುವ ಅವರ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಹೇಳಿದ್ದು ಅಲ್ಲೇ ಡ್ರಾ ಅಲ್ಲೆ ಬಹುಮಾನ ಎಂಬಂತೆ ಹಾಲಾಡಿ ಟಾಂಗ್ ಕೊಟ್ಟಿದ್ದು ಹೀಗೆ….

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಮಂತ್ರಿಯಾಗುತ್ತಾರೆ ಎಂದು ಸಚಿವ ಶ್ರೀರಾಮುಲು ನುಡಿದಾಗ, ತಕ್ಷಣವೇ ಪ್ರತಿಸ್ಪಂದಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ನನ್ನ ಆಯಸ್ಸನ್ನು ಹೆಚ್ಚಿಸಲು ನಿಮಗೆ ಸಾಧ್ಯವಾ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅವಕಾಶವಾದಿಗಳು, ಸ್ವಾರ್ತಿಗಳೇ ತುಂಬಿರುವ ಈ ವ್ಯವಸ್ಥೆಯಲ್ಲಿ ಶ್ರೀನಿವಾಸ ಶೆಟ್ಟಿಯಂತವರು ಅಪರೂಪ. ನಾವೆಲ್ಲರೂ ಮುಂದೆ ಬಂದುನಿಂತು ಉದ್ಘಾಟನೆ ಮಾಡುತ್ತಿದ್ದರೆ ಶ್ರೀನಿವಾಸ ಶೆಟ್ಟಿಯವರು ಹಿಂದೆ ಹಿಂದೆ ಸರಿದು ಜನರ ನಡುವೆ ನಿಲ್ಲುತ್ತಾರೆ. ನಾಳೆ ಅವರು ಮಂತ್ರಿಗಳಾದರೆ ಅವರೇ ಉದ್ಘಾಟನೆ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಅವರು ಹಿಂದೆ ಹೋದರೆ ಜನರು ಒಪ್ಪಿಕೊಳ್ಳೋದಿಲ್ಲ. ಮೊದಲಿನಿಂದಲೂ ಜನರ ಮಧ್ಯೆ ಇದ್ದ ಹಾಲಾಡಿಯವರು, ತಮ್ಮ ಜನಪ್ರೀಯತೆಯಿಂದ ಸತತವಾಗಿ ಐದು ಬಾರಿ ಶಾಸಕರಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರ ಜೊತೆ ಬಿಜೆಪಿಯ ಜನ ಚೈತನ್ಯ ಯಾತ್ರೆಯಲ್ಲಿ ಪಾಲ್ಘೊಂಡ ಬಗ್ಗೆ ಮೆಲಕು ಹಾಕಿದ ಶ್ರೀರಾಮುಲು ಅವರು ಹಾಲಾಡಿ ಬಗೆಗಿನ ಪ್ರೀತಿಗೆ ಅಂದಿನ ಜನಸ್ತೋಮ ಸಾಕ್ಷಿ, ಎಂದು ಶಾಸಕ ಹಾಲಾಡಿಯವರನ್ನು ಹಾಡಿಹೊಗಳಿದರು.

ಇದೆಲ್ಲದರ ಬಳಿಕ ತಮ್ಮ ಭಾಷಣದ ವೇಳೆಯಲ್ಲಿ ಸಚಿವರ ಮಾತಿಗೆ ಪ್ರತಿಕ್ರಿಯಿಸಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಯೋಜನೆಗಳಿಗೆ ವೆಚ್ಚ ಮಾಡುವ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿ ಮಾಡುವ ಕಾರ್ಯಕ್ರಮಗಳಿಗೆ ಹೋಗ ಬಾರದು ಎನ್ನುವ ತೀರ್ಮಾನವನ್ನು ವಿದ್ಯಾರ್ಥಿ ಜೀವನದಿಂದಲೇ ಕೈಗೊಂಡಿದ್ದೇನೆ. ಹೀಗಾಗಿ ಶಂಕುಸ್ಥಾಪನೆ, ಕಟ್ಟಡ ಉದ್ಘಾಟನೆಗಳಂತಹ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲೇ ಕೂತು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಹೆಚ್ಚು ಮಾತನಾಡಿ ಸಮಯ ವ್ಯರ್ಥ ಮಾಡುವ ಮನಸ್ಸು ನನಗಿಲ್ಲ. ಮಾತನಾಡಲೇಬೇಕಾದರೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಬಗ್ಗೆಯೂ ಮಾತನಾಡುವೆ. ಅನುಮತಿ ಕೊಟ್ಟರೆ ಇಲ್ಲಿಯೇ ಮೂರು ಗಂಟೆಯೂ ಬೇಕಾದರೆ ಮಾತನಾಡುವೆ ಎಂದರು.

ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಡುಪಿ ಅಂಬಲಪಾಡಿಯ ಜಿ.ಶಂಕರ್‌ಫ್ಯಾಮಿಲಿ ಟ್ರಸ್ಟ್‌ವತಿಯಿಂದ ನಿರ್ಮಿಸಲಾದ ದಿ.ಲಕ್ಷ್ಮೀ ಸೋಮ ಬಂಗೇರ ನೂತನ ಹೆರಿಗೆ ಆಸ್ಪತ್ರೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಬಳಿಕ ನಡೆದ ಸಭೆಯಲ್ಲಿ ಈ ಪ್ರಸಂಗ ನಡೆಯಿತು.

(ವರದಿ- ಯೋಗೀಶ್ ಕುಂಭಾಸಿ)

Comments are closed.