ಕರಾವಳಿ

ಇದು ಹಿಂದೂ ರಾಷ್ಟ್ರ” ಎಂದು ಹೇಳಿದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ: ಮೂವರ ಸೆರೆ – ಇನ್ನುಳಿದವರಿಗಾಗಿ ಶೋಧ

Pinterest LinkedIn Tumblr

ಬಂಧಿತ ಆರೋಪಿಗಳು

ಮಂಗಳೂರು, ಸೆಪ್ಟಂಬರ್. 26 : ನಗರದ ಪಾಂಡೇಶ್ವರ ಸಮೀಪದ ಫೋರಂ ಫಿಝಾ ಮಾಲ್‌ನಲ್ಲಿ ಬುಧವಾರ ಮಧ್ಯಾಹ್ನ ಇದು ಹಿಂದೂ ರಾಷ್ಟ್ರ’ ಎಂದು ವಾದಿಸಿದ ಯುವಕನೊಬ್ಬನಿಗೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಮಂಜುನಾಥ್ ಹಲ್ಲೆಗೊಳಗಾದ ಯುವಕನಾಗಿದ್ದು, ಆತ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಹಿಯುದ್ದೀನ್ ಸಫ್ವಾನ್, ಅಬ್ದುಲ್ ರಹೀಂ ಸಾದ್ ಹಾಗೂ ಇನ್ನೋರ್ವ ಬಾಲಾಪರಾಧಿಯನ್ನು ಬಂಧಿಸಲಾಗಿದೆ.

ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಬುಧವಾರ ಪೂರ್ವಾಹ್ನ ಸುಮಾರು 11:30ರ ವೇಳೆಗೆ ಖಾಸಗಿ ಮಾಲ್‌ನ ಫುಡ್ ಕೋರ್ಟ್‌ಗೆ ‘ಚಹಾ’ ಸೇವಿಸಲು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಮಂಜುನಾಥ್ ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ತಂಡದ ಮಧ್ಯೆ ಇದು ಹಿಂದೂ ರಾಷ್ಟ್ರ’ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿ ಮಂಜುನಾಥ್

ಮಂಜುನಾಥ್ ಅವರ ಮೇಲೆ ಥಳಿಸುವುದನ್ನು ವಿದ್ಯಾರ್ಥಿಗಳು ವೀಡಿಯೋ ಮಾಡಿದ್ದಾರೆ. ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಮಂಜುನಾಥ್ ಎಂಬಾಂತ “ಇದು ಹಿಂದೂ ರಾಷ್ಟ್ರ” ಎಂದು ಹೇಳುತ್ತಿರುವುದನ್ನು ಗೋಚರಿಸುತ್ತಿದೆ. ‘ಯುವಕ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ವಿದ್ಯಾರ್ಥಿಗಳ ಗುಂಪಿನಿಂದ ದೂರುದಾರ ಮಂಜುನಾಥ್ ನನ್ನು ಥಳಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ್ ವಿದ್ಯಾರ್ಥಿಗಳ ಜೊತೆ ಮಾತಿನ ಚಕಮಕಿ ನಡೆಸಿದ ವೇಳೆ ‘ಇದು ಹಿಂದೂ ರಾಷ್ಟ್ರ. ಮುಸ್ಲಿಮರು ಇಲ್ಲಿಗೆ ಬರಬಾರದು’ ಎಂದಿದ್ದಾನೆ ಎನ್ನಲಾಗಿದೆ. ತಕ್ಷಣ ಅಲ್ಲಿದ್ದ ಇತರರು ಆತನನ್ನು ಸುತ್ತುವರಿದು ಅದೇ ಮಾತನ್ನು ಪುನರುಚ್ಚರಿಸುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ವೀಡಿಯೋದೊಂದಿಗೆ ಮಲಯಾಳಂ ಭಾಷೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನಿಗೆ ಘಟನೆಯ ಬಗ್ಗೆ ವಿವರಿಸುವ ಆಡಿಯೋ ಕೂಡ ಇದೆ. ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಸೆರೆಗೆ ಕ್ರಮ ಜರುಗಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ‘ಕೃತ್ಯದಲ್ಲಿ ತೊಡಗಿದ್ದವರಲ್ಲಿ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಬಹ್ಹೆ ಮಾಹಿತಿ ಲಭ್ಯವಾಗಿದೆ. ಅವರು ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಕ್ಕಿಳಿದವನನ್ನು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿದವರನ್ನು ಶೀಘ್ರ ಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Comments are closed.