ಕರಾವಳಿ

ದುಬಾರಿ ದಂಡ. ಅನಗತ್ಯ ಕಿರುಕುಳ ನಿಲ್ಲಲಿ: ಕುಂದಾಪುರದಲ್ಲಿ ಆಟೋ, ವಾಹನ ಚಾಲಕರ ಪ್ರತಿಭಟನೆ

Pinterest LinkedIn Tumblr

ಕುಂದಾಪುರ : ದೇಶದಲ್ಲಿ ಜಾರಿಗೆ ಬಂದಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆ, ಐಎಂವಿ ವಿಧೇಯಕದ ಅಡಿಯಲ್ಲಿ ಹಾಕುತ್ತಿರುವ ದುಬಾರಿ ದಂಡ ಹಾಗೂ ಚಾಲಕರ ವಿರುದ್ದ ಪೊಲೀಸ್‌ ಅಧಿಕಾರಿಗಳು ತೋರುತ್ತಿರುವ ವರ್ತನೆ, ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಪೂರ್ಣಗೊಳ್ಳದ ಫ್ಲೈ ಓವರ್‌ ಕಾಮಗಾರಿಯ ನಿರ್ಲಕ್ಷ್ಯವನ್ನು ವಿರೋಧಿಸಿ ಬುಧವಾರ ಕುಂದಾಪುರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ವಾಹನದ ಚಾಲಕ ಹಾಗೂ ಮಾಲಕರು ಬ್ರಹತ್‌ ಪ್ರತಿಭಟನೆ ನಡೆಸಿದರು.

ಸಿಐಟಿಯು ತಾಲ್ಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ, ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಹಾಗೂ ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಷನ್ಸ್ (ಇಂಟಕ್) ಇವರ ಸಂಯುಕ್ತ ಸಹಭಾಗಿತ್ವದಲ್ಲಿ ರಚಿತವಾದ ಕುಂದಾಪುರ ತಾಲ್ಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿಯ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ದುಬಾರಿ ದಂಡ ಹಾಗೂ ಅನಗತ್ಯ ಕಿರುಕುಳಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರ ಮೋಟಾರು ವಾಹನ ಕಾಯಿದೆ 2019 ತಿದ್ದುಪಡಿ ಮಸೂದೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. 15 ವರ್ಷಗಳ ಹಳೆಯ ಆಟೋಗಳ ಓಡಾಟವನ್ನು ರದ್ದು ಪಡಿಸುತ್ತಿದ್ದು, ಕಂಪೆನಿಗಳಿಂದ ಹಳೆ ಆಟೋಗಳಿಗೆ ದರ ನಿಗದಿಪಡಿಸಬೇಕು. ಹಳೆ ಆಟೋಗಳ ವಿಲೆವಾರಿಗೆ ಸರ್ಕಾರದಿಂದ 50,000 ಪ್ರೋತ್ಸಾಹ ಧನ ನೀಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಏರಿಕೆಯಾಗುತ್ತಿರುವ ವಾಹನಗಳ ವಿಮಾ ಮೊತ್ತವನ್ನು ನಿಯಂತ್ರಿಸಬೇಕು. ಆಟೋ ಚಾಲಕರಿಗೆ ಮನೆ ಹಾಗೂ ಕಾಲೋನಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಅರ್ಧಕ್ಕೆ ನಿಂತಿರುವ ಫ್ಲೈ ಓವರ್‌ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಶಾಸ್ತ್ರಿ ಸರ್ಕಲ್‌ನಿಂದ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು, ತಹಶೀಲ್ದಾರ್‌ ತಿಪ್ಪೇಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಿಐಟಿಯು ತಾಲ್ಲೂಕು ಅಧ್ಯಕ್ಷ ಎಚ್‌.ನರಸಿಂಹ, ಸಿಐಟಿಯು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಯ ಲಕ್ಷಣ ಬರೆಕಟ್ಟು, ರಾಜು ದೇವಾಡಿಗ, ರಮೇಶ್‌ ವಡೇರಹೋಬಳಿ, ವಿ.ಚಂದ್ರ, ಇಂಟಕ್‌ ಸಂಘಟನೆಯ ಲಕ್ಷಣ ಶೆಟ್ಟಿ, ಮಾಣಿ ಉದಯ್‌ಕುಮಾರ, ಜನಾರ್ಧನ್‌ ಖಾರ್ವಿ, ಆನಂದ, ಚಾರ್ಲ್ಸ್‌ ಲೂಯಿಸ್‌, ಬಿಎಂಎಸ್‌ ಸಂಘಟನೆಯ ಸುರೇಶ್‌ ಪುತ್ರನ್‌, ಭಾಸ್ಕರ್‌, ವೇಣು, ಗುರುರಾಜ್‌, ಮಂಜುನಾಥ ಇದ್ದರು.

Comments are closed.