ಕರಾವಳಿ

ಕ್ಯಾಥೋಲಿಕ್ ಕ್ರೈಸ್ತರ ಪವಿತ್ರ ಹಬ್ಬ ಮೋಂತಿ ಫೆಸ್ಟ್ ; ಕರಾವಳಿಯಾದ್ಯಂತ ಕ್ರೈಸ್ತ ಬಾಂಧವರಿಂದ ಪವಿತ್ರ ತೆನೆ ಹಬ್ಬ ಆಚರಣೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.09 :ಕ್ಯಾಥೋಲಿಕ್ ಕ್ರೈಸ್ತರ ಪವಿತ್ರ ಹಬ್ಬ ಮೋಂತಿ ಫೆಸ್ಟ್ ಅಥವಾ ತೆನೆ ಹಬ್ಬವನ್ನು ಕರಾವಳಿಯಾದ್ಯಂತ ರವಿವಾರ ಕ್ರೈಸ್ತ ಬಾಂಧವರು ಸಡಗರ-ಸಂಭ್ರಮದಿಂದ ಆಚರಿಸಿದರು. ಯೇಸುಕ್ರಿಸ್ತರ ತಾಯಿ ಮೇರಿಮಾತೆಯ ಜನ್ಮದಿನವನ್ನು ಸೆ.8ರಂದು ಆಚರಿಸಲಾಗುತ್ತಿದೆ. ಮೇರಿ ಮಾತೆ ದೇವಮಾತೆ ಆಗಿದ್ದು ಪವಾಡಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಕೆಥೋಲಿಕರ ನಂಬಿಕೆ. ಕೈಸ್ತರು ಬಾಲೆ ಮೇರಿಗೆ ನಮಿಸುವುದರ ಜತೆಗೆ ಹೊಸ ಬೆಳೆಯ ಹಬ್ಬವನ್ನು ಆಚರಿಸಿದರು.

ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತದ ಪ್ರಧಾನ ಧರ್ಮಗುರು ಫಾ.ಮ್ಯಾಕ್ಸಿಂ ನೊರೊನ್ನಾ ಅವರು ಬಲಿಪೂಜೆ ನೆರವೇರಿಸಿದರು. ಕೆಥಡ್ರಲ್‌ನ ಧರ್ಮಗುರು ಫಾ ಜೆ.ಬಿ.ಕ್ರಾಸ್ತಾ ಅವರು ಉಪಸ್ಥಿತರಿದ್ದರು. ಅದೇರೀತಿ ಬೊಂದೆಲ್‌ನಲ್ಲಿರುವ ಸೈಂಟ್ ಲಾರೆನ್ಸ್ ಚರ್ಚ್, ಉರ್ವಾ ಚರ್ಚ್, ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಹಾಗೂ ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕಿನ ಚರ್ಚ್‌ಗಳಲ್ಲಿ ಚರ್ಚ್ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು.

ಮಾತೆ ಮರಿಯಮ್ಮರ ಬಾಲ ರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆಯಿತು. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮೆರವಣಿಗೆಯಲ್ಲಿ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಿದರು. ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದ ಕ್ರೈಸ್ತರು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು.

ಸೆ ೮ ಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರಿಗೆ ಪವಿತ್ರ ದಿನ. ಕನ್ಯಾ ಮರಿಯಮ್ಮರ ಜನ್ಮ ದಿನವಾದ ಈ ದಿನದಲ್ಲಿ ಹೊಸ ಬೆಳೆಯನ್ನು ಚರ್ಚ ಗೆ ತಂದು ಪೂಜೆ ಮಾಡಲಾಗುತ್ತದೆ. ಬಳಿಕ ಮನೆಗೆ ಕೊಂಡೊಯ್ದು ಹಬ್ಬ ಆಚರಿಸುತ್ತಾರೆ. ಮೇರಿ ಮಾತೆಯ ಜನುಮ ದಿನ ಮತ್ತು ಹೊಸ ಬೆಳೆಯ ಹಬ್ಬವಾಗಿ ಈ ದಿನವನ್ನು ಆಚರಿಸಲಾಗುತ್ತದೆ.ಕರಾವಳಿಯ ವಿವಿಧ ಚರ್ಚ ಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭ ಚರ್ಚ ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಭತ್ತದ ಹೊಸ ಬೆಳೆ ಬಂದಾಗ ಅದನ್ನು ರೈತರು ಹೊಸ ಬೆಳೆಯ ಹಬ್ಬವಾಗಿ ಆಚರಿಸುವದು ಕರಾವಳಿಯ ಸಂಪ್ರದಾಯ. ಇದು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಾಗಿರದೇ ಕರಾವಳಿಯ ಕ್ಯಾಥೋಲಿಕ್ ಕ್ರೈಸ್ತರು ಕೂಡಾ ಈ ಹೊಸ ಹಬ್ಬವನ್ನು ಸಂಬ್ರದಿಂದ ಆಚರಿಸಿಕೊಳ್ಳುತ್ತಾರೆ.

ಮಕ್ಕಳ ಕೈಯಲ್ಲಿ ಬಗೆಬಗೆಯ ಹೂವುಗಳು, ಭತ್ತದ ತೆನೆಯನ್ನು ಹಿಡಿದು ಪೂಜಿಸುತ್ತಿರುವ ಕ್ರೈಸ್ತ ಬಾಂಧವರು, ಮಹಿಳೆಯರ ಕೈಯಲ್ಲಿ ಕಬ್ಬು.. ಇದು ಕರಾವಳಿ ಜಿಲ್ಲೆಯಾದ್ಯಂತ ಮೇರಿ ಮಾತೆಯ ಜನ್ಮ ದಿನದ ಪ್ರಯುಕ್ತ ನಡೆಯುವ ತೆನೆ ಹಬ್ಬದ ದೃಶ್ಯ.. ಮೇರಿ ಮಾತೆಯ ಜನುಮದಿನವನ್ನು ತೆನೆ ಹಬ್ಬದ ಮೂಲಕ ಕ್ರೈಸ್ತ ಬಾಂಧವರು ಭಕ್ತಿ, ಭಾವದಿಂದ ಆಚರಿಸಿ ಕೊಂಡರು.

ಮೋಂತಿ ಫೇಸ್ಟ್ ಎಲ್ಲರ ಹಬ್ಬ. ಮಕ್ಕಳು ಮಹಿಳೆಯರು ಕುಟುಂಬ ಎಲ್ಲ ಜನರು ಇದರಲ್ಲಿ ಭಾಗವಹಿಸುತ್ತಾರೆ. ಮಕ್ಕಳು ಹೂವುಗಳನ್ನು ಸಂಗ್ರಹಿಸಿ ಈ ದಿನದಂದು ಚರ್ಚ ಗೆ ತಂದು ಮಾತೆ ಮೇರಿಗೆ ಅರ್ಪಿಸುತ್ತಾರೆ. ಇದನ್ನು ನೋವೇನಾ ಎಂದು ಹೇಳುತ್ತಾರೆ. ಇದರ ಜೊತೆಗೆ ಕಬ್ಬುಗಳನ್ನು ಕೂಡಾ ಅರ್ಪಿಸುವುದುಂಟು.

ತೆನೆ ಹಾಗೂ ಕಬ್ಬನ್ನು ಮತ್ತೆ ಮನೆಗೆ ತೆಗೆದುಕೊಂಡು ಹೋಗಿ ಮನೆಯಲ್ಲಿ ಸಂಬ್ರಮದಿಂದ ಹೊಸ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಕ್ರೈಸ್ತರು ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಒಟ್ಟಿನಲ್ಲಿ ಕರಾವಳಿಯ ಕ್ರೈಸರು ಇಂದು ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ತೆನೆ ಹಬ್ಬ ಬರೀ ಹಿಂದೂಗಳಿಗೆ ಮಾತ್ರ ಸೀಮಿತ ಆಗದೇ ಕ್ರೈಸ್ತರಲ್ಲೂ ಈ ಆಚರಣೆ ನಡೆಯುತ್ತಾ ಬಂದಿದೆ.

ಹಬ್ಬದ ಕೊನೆಯ ದಿನವಾದ ಮಾತೆಯ ಜನ್ಮದಿನದಂದು ಹೊಸ ಭತ್ತದ ತೆನೆಯನ್ನು ಚರ್ಚ್‌ಗಳಲ್ಲಿ ನೀಡಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಹೊಸ ಅಕ್ಕಿ ಊಟ ಮಾಡುವ ಮೂಲಕ ಹಬ್ಬದ ಸವಿಯುಣ್ಣುತ್ತಾರೆ. ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಸೇವಿಸುವುದು ಈ ಹಬ್ಬದ ವಿಶೇಷವಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸದ ಮೂಲಕ ಮಾಡುವ ಹೊಸ ಅಕ್ಕಿಯ ಊಟ ಈ ದಿನದ ವಿಶೇಷವಾಗಿದೆ.

Comments are closed.